ತೆಲಂಗಾಣದ ನಲ್ಗೊಂಡದ ನೀರಿನ ತೊಟ್ಟಿಯಲ್ಲಿ 30 ಸತ್ತ ಕೋತಿಗಳು ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್) ಮುಖಂಡ ಮತ್ತು ತೆಲಂಗಾಣ ಮಾಜಿ ಸಚಿವ ಕೆ.ಟಿ. ರಾಮರಾವ್ ಅವರು ನಲ್ಗೊಂಡಾದಲ್ಲಿನ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಸತ್ತ ಕೋತಿಗಳ 30 ಶವಗಳು ಪತ್ತೆಯಾದ ನಂತರ ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ಸರ್ಕಾರವನ್ನು ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೆಟಿಆರ್, ಕಾಂಗ್ರೆಸ್ ಸರ್ಕಾರ ಸಾರ್ವಜನಿಕ ಆರೋಗ್ಯದ ಬದಲಿಗೆ ರಾಜಕೀಯಕ್ಕೆ ಆದ್ಯತೆ ನೀಡಿದ್ದರಿಂದ ಆಡಳಿತವು ಹದಗೆಟ್ಟಿದೆ. ತೆಲಂಗಾಣ ಮುನ್ಸಿಪಲ್ ಇಲಾಖೆಯಲ್ಲಿ ಎಂತಹ ನಾಚಿಕೆಗೇಡಿನ ಸ್ಥಿತಿ ಇದೆ ಎಂದರೆ ಅನುಸರಿಸಬೇಕಾದ ಮಾರ್ಗಸೂಚಿ ಪಾಲಿಸುತ್ತಿಲ್ಲ, ನಿತ್ಯ ನಿರ್ವಹಣೆ ಇಲ್ಲವಾಗಿದೆ. ನೀರಿನ ಟ್ಯಾಂಕ್ ಶುಚಿಗೊಳಿಸುತ್ತಿಲ್ಲ ಎಂದು ದೂರಿದ್ದಾರೆ.
ಕಳೆದ ಕೆಲವು ದಿನಗಳಿಂದ ಯಾವುದೇ ಪರಿಶೀಲನೆ ನಡೆಸದೇ ಅದೇ ಕುಡಿಯುವ ನೀರನ್ನು ಜನರಿಗೆ ಸರಬರಾಜು ಮಾಡಲಾಗುತ್ತಿದೆ. ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ತೊಟ್ಟಿಯನ್ನು ತೆರೆದಿರುವುದರಿಂದ ಮಂಗಗಳ ಸಾವಿಗೆ ಕಾರಣವಾಗಿದೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪಿಸಿದ್ದಾರೆ.