ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಪ್ರಸ್ತುತ ದಿನಗಳಲ್ಲಿ ಪೋಷಕರು ತಮ್ಮ ಮಗಳನ್ನು ಗ್ರಾಮೀಣ ಪ್ರದೇಶಕ್ಕೆ ಮದುವೆ ಮಾಡಿಕೊಡಲು ಹಿಂದೇಟು ಹಾಕುತ್ತಾರೆ. ಹುಡುಗಿಯರೂ ಸಹ ಬೆಂಗಳೂರು, ಮೈಸೂರು ಮೊದಲಾದ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ವರನನ್ನು ಬಯಸುತ್ತಾರೆ.
ಅದರಲ್ಲೂ ಗ್ರಾಮೀಣ ಪ್ರದೇಶದ ರೈತರಿಗೆ ಹೆಣ್ಣು ಕೊಡಲು ಹೆತ್ತವರು ಮುಂದೆ ಬರುತ್ತಿಲ್ಲ. ಹೀಗಾಗಿ ಸುಮಾರು 200 ಕ್ಕೂ ಅಧಿಕ ಮಂದಿ ಅವಿವಾಹಿತರು ಇದೇ ಫೆಬ್ರವರಿ 23ರಂದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿಯಿಂದ 105 ಕಿಲೋ ಮೀಟರ್ ದೂರದಲ್ಲಿರುವ ಮಲೈ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಮಲೈ ಮಹದೇಶ್ವರ ತಮ್ಮ ಬೇಡಿಕೆಯನ್ನು ಈಡೇರಿಸುತ್ತಾನೆ ಎಂಬ ನಂಬಿಕೆಯಿಂದ ಇವರುಗಳು ಪಾದಯಾತ್ರೆ ಹಮ್ಮಿಕೊಂಡಿದ್ದು, ಮುನ್ನೂರಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದರು. ಈ ಪೈಕಿ ಸುಮಾರು 200 ಮಂದಿ ತಾವು ಇದರಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಮಂಡ್ಯ, ಮೈಸೂರು, ಶಿವಮೊಗ್ಗ, ಮತ್ತು ಚಾಮರಾಜನಗರ ಜಿಲ್ಲೆಯ ಗ್ರಾಮೀಣ ಭಾಗದ ಅವಿವಾಹಿತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಫೆಬ್ರವರಿ 23 ರಿಂದ ಆರಂಭವಾಗುವ ‘ಬ್ರಹ್ಮಚಾರಿಗಳ ಪಾದಯಾತ್ರೆ’ ಫೆಬ್ರವರಿ 25ಕ್ಕೆ ಮಲೈ ಮಹದೇಶ್ವರ ಬೆಟ್ಟ ತಲುಪಲಿದೆ. ಅಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.