ಬೆಂಗಳೂರು: ನಿಗದಿತ ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಕರೆದೊಯ್ಯಲು ವಿಫಲವಾಗಿದ್ದಕ್ಕೆ, ಪ್ರಯಾಣಿಕರಿಗೆ 1,000 ರೂ. ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಗೆ ಬೆಂಗಳೂರಿನ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
ನಗರದ ಬನಶಂಕರಿ ನಿವಾಸಿ ಅರವತ್ತೇಳು ವರ್ಷದ ಎಸ್. ಸಂಗಮೇಶ್ವರನ್ ಅವರು, ಅಕ್ಟೋಬರ್ 12, 2019 ರಂದು ಕೆಎಸ್‌ಆರ್‌ಟಿಸಿ ಐರಾವತ್ ಕ್ಲಬ್ ಕ್ಲಾಸ್ ಬಸ್‌ನಲ್ಲಿ ತಮಿಳುನಾಡಿನ ತಿರುವಣ್ಣಾಮಲೈನಿಂದ ಬೆಂಗಳೂರಿಗೆ ಹಿಂತಿರುಗಲು ಟಿಕೆಟ್ ಬುಕ್ ಮಾಡಿದ್ದರು.
ಅಕ್ಟೋಬರ್ 13, 2019 ರಂದು ತಿರುವಣ್ಣಾಮಲೈನಿಂದ ಹಿಂದಿರುಗುತ್ತಿದ್ದಾಗ, ಪ್ರಯಾಣಿಕರು ನಿಗದಿತ ಬಸ್ ನಿಲ್ದಾಣವನ್ನು ಸಮಯಕ್ಕೆ ತಲುಪಿದ್ದರೂ, ಅವರನ್ನು ಪಿಕಪ್ ಮಾಡಲಿಲ್ಲ. ಬದಲಿಗೆ ಪ್ರಯಾಣದ ವಿವರಗಳು ಮತ್ತು ಕಂಡಕ್ಟರ್‌ನ ಸಂಪರ್ಕ ಸಂಖ್ಯೆಯನ್ನು ಹೊಂದಿರುವ ಎಸ್ಎಂಎಸ್ ಅನ್ನು ಅವರು ಸ್ವೀಕರಿಸಿದ್ದಾರೆ.
ಪ್ರಯಾಣಿಕರು ಬಸ್ ಕಂಡಕ್ಟರ್ ಗೆ ಕರೆ ಮಾಡಿದಾಗ, ತಿರುವಣ್ಣಾಮಲೈನಿಂದ ಈಗಾಗಲೇ ಹೊರಟಿರುವುದಾಗಿ ತಿಳಿಸಿದರಲ್ಲದೆ, ತಡವಾಗಿ ಬಂದಿದ್ದಕ್ಕಾಗಿ ಸಂಗಮೇಶ್ವರನ್ ಅವರನ್ನು ದೂಷಿಸಿದ್ದಾರೆ. ಇದರಿಂದ ವಯೋವೃದ್ಧರು ತಮಿಳುನಾಡಿನ ಹೊಸೂರಿಗೆ ಬಸ್ ನಲ್ಲಿ ಬಂದು ಅಲ್ಲಿಂದ ಬೇರೆ ಬಸ್ ಮುಖಾಂತರ ಬೆಂಗಳೂರು ತಲುಪಬೇಕಾಯ್ತು.
ಇನ್ನು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಜನರಲ್ ಮ್ಯಾನೇಜರ್ ವಿರುದ್ಧ ಸಂಗಮೇಶ್ವರನ್ ಅವರು ಬೆಂಗಳೂರು ಎರಡನೇ ನಗರ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ದೂರುದಾರರು ಕಾನೂನಿನ ಪ್ರಕಾರ ಪರಿಹಾರವನ್ನು ಪಡೆಯಲು ಜವಾಬ್ದಾರರಾಗಿರುವುದಿಲ್ಲ ಎಂದು ಕೆಎಸ್ಆರ್ಟಿಸಿ ಸಮರ್ಥಿಸಿಕೊಂಡಿದೆ. ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದ ತಿರುವಣ್ಣಾಮಲೈನಲ್ಲಿ ಪ್ರಕರಣ ನಡೆದಿರುವುದರಿಂದ ಅದನ್ನು ವಜಾಗೊಳಿಸಬೇಕು ಎಂದು ಅದು ವಾದಿಸಿದೆ. ಬಸ್ ನಿಲ್ದಾಣದ ಸ್ಥಳಾಂತರದ ಬಗ್ಗೆ ದೂರುದಾರರಿಗೆ ಎಸ್ಎಂಎಸ್ ಕಳುಹಿಸಲಾಗಿತ್ತು ಎಂದು ಅದು ಸಮರ್ಥಿಸಿಕೊಂಡಿದೆ. ಅಲ್ಲದೆ ಬದಲಾದ ಸ್ಥಳದಿಂದ ಸುಮಾರು 23 ಪ್ರಯಾಣಿಕರು ಬಸ್ ಹತ್ತಿದ್ದಾರೆ ಎಂದು ಅದು ಕೂಡ ಕೆಎಸ್ಆರ್ಟಿಸಿ ವಾದಿಸಿತ್ತು.
ಆದರೆ, ಯಾವುದೇ ಪುರಾವೆಗಳನ್ನು ಸಲ್ಲಿಸಲು ವಿಫಲವಾದ ಕಾರಣ ಗ್ರಾಹಕ ನ್ಯಾಯಾಲಯ ಕೆಎಸ್ಆರ್ಟಿಸಿಯ ವಾದವನ್ನು ಒಪ್ಪಲಿಲ್ಲ. ಹಿರಿಯ ನಾಗರಿಕರಾಗಿರುವ ದೂರುದಾರರಿಗೆ ಆಗಿರುವ ಅನಾನುಕೂಲತೆಗಾಗಿ 1,000 ರೂಪಾಯಿ ಪರಿಹಾರವನ್ನು ನೀಡುವಂತೆ ಗ್ರಾಹಕ ನ್ಯಾಯಾಲಯ ಕೆಎಸ್ಆರ್ಟಿಸಿಗೆ ಆದೇಶಿಸಿದೆ.