ಚಾಮರಾಜನಗರ: ತಾಯಿ ತನ್ನ ಮಗುವನ್ನು ಕಸದ ತೊಟ್ಟಿಗೆ ಎಸೆದಿರುವ ಹೃದಯ ವಿದ್ರಾವಕ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಳಿಕ ತಾನು ಅಸಹಾಯಕಳಾಗಿದ್ದು, ಮಗುವನ್ನು ಸಾಕಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರಲ್ಲಿ ಹೇಳಿಕೊಂಡಿದ್ದಾಳೆ.
ಕೊಳ್ಳೇಗಾಲ ಬಳಿಯ ಮತ್ತಿಪುರ ಬಸ್ ನಿಲ್ದಾಣದಲ್ಲಿ ಎರಡು ದಿನದ ಹಸುಳೆಯನ್ನು ಕಸದ ತೊಟ್ಟಿಯಲ್ಲಿ ಬಿಟ್ಟು ಹೋಗಿದ್ದಳು. ನವಜಾತಶಿಶುವನ್ನು ಸ್ಥಳೀಯರು ಮುಂಜಾನೆ ಪತ್ತೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮಗುವನ್ನು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಈ ಘಟನೆಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಜನರು ತನ್ನ ನವಜಾತ ಶಿಶುವನ್ನು ಕಸದ ತೊಟ್ಟಿಯಲ್ಲಿ ಬಿಟ್ಟುಹೋದ ತಾಯಿಯನ್ನು ಖಂಡಿಸಿದರು. ಅದೃಷ್ಟವಶಾತ್, ಬೀದಿ ನಾಯಿಗಳು ಮಗುವನ್ನು ಕೊಂದು ಹಾಕುವ ಮೊದಲು ಜನರು ನವಜಾತ ಶಿಶುವನ್ನು ಗಮನಿಸಿ ರಕ್ಷಿಸಿದ್ದಾರೆ.
ನಂತರ ಪೊಲೀಸರ ಮುಂದೆ ಹಾಜರಾದ ತಾಯಿ, ಪತಿ ತನ್ನನ್ನು ತೊರೆದಿದ್ದು, ತನಗೆ ಯಾವುದೇ ಆದಾಯವಿಲ್ಲದ ಕಾರಣ ತಾನು ಒಬ್ಬಂಟಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಮಗುವನ್ನು ಸಾಕಲು ಸಾಧ್ಯವಾಗದ ಕಾರಣ ಮಗುವನ್ನು ಕಸದತೊಟ್ಟಿಗೆ ಎಸೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಆಕೆಯ ಹೇಳಿಕೆಯನ್ನು ಖಚಿತಪಡಿಸಿದ ನಂತರ, ಪೊಲೀಸರು ಮಗುವನ್ನು ಆಕೆಗೆ ಹಸ್ತಾಂತರಿಸಿದ್ರು.
ಮಗುವನ್ನು ಯಾರಾದರೂ ದತ್ತು ಪಡೆಯುವವರೆಗೆ ಮಗುವಿಗೆ ಹಾನಿ ಮಾಡದಂತೆ ಪೊಲೀಸರು ಎಚ್ಚರಿಸಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.