ಬೆಂಗಳೂರು: ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲು 3604 ಹೊಸ ಬಸ್ ಗಳನ್ನು ಖರೀದಿಸಲಾಗುತ್ತಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಈ. ತುಕಾರಾಂ ಅವರ ಪ್ರಶ್ನೆಗೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಪರವಾಗಿ ಸಚಿವ ವಿ. ಸುನಿಲ್ ಕುಮಾರ್ ಉತ್ತರ ನೀಡಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ 800 ಬಸ್ ಖರೀದಿಗೆ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಶೀಘ್ರವೇ ಖರೀದಿ ಪ್ರಕ್ರಿಯೆ ನಡೆಸಿ ಬಸ್ ಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಶಾಲಾ ಕಾಲೇಜು ಆರಂಭವಾಗುವ ಜೂನ್ ವೇಳೆಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕಲ್ಯಾಣ ಕರ್ನಾಟಕ ವ್ಯಾಪ್ತಿಯ 41 ವಿಧಾನಸಭೆ ಕ್ಷೇತ್ರಗಳಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 45 ಘಟಕಗಳಿದ್ದು, ಸಿಬ್ಬಂದಿ ಕೊರತೆ ಇದ್ದರೂ ಸಂಪನ್ಮೂಲ ಬಳಸಿಕೊಂಡು ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಗುಣವಾಗಿ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
925 ಚಾಲಕರು, 694 ಚಾಲಕ ಕಮ್ ನಿರ್ವಾಹಕ ಮತ್ತು 300 ನಿರ್ವಾಹಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಚಿವರು ಹೇಳಿದ್ದಾರೆ.