ಧಾರವಾಡ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟವು ಏಪ್ರೀಲ್ 7 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಖಾಸಗಿ ಸೇವಾ ವಾಹನಗಳು, ಶಾಲಾ ವಾಹನಗಳು, ಮ್ಯಾಕ್ಸಿಕ್ಯಾಬ್‍ಗಳು, ಪ್ರವಾಸಿ ವಾಹನಗಳು, ಒಪ್ಪಂದ ವಾಹನಗಳಿಗೆ ಮೋಟಾರು ವಾಹನ ಕಾಯ್ದೆ 1988 ಸೆಕ್ಷನ್ 87/1/ಸಿ ಅಡಿಯಲ್ಲಿ ತಾತ್ಕಾಲಿಕ ರಹದಾರಿಗಳನ್ನು ನೀಡಿ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆಯಲ್ಲಿ ತೊಂದರೆಯಾಗದಂತೆ ಕ್ರಮ ಜರುಗಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏಪ್ರೀಲ್ 7 ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಅವಧಿಯಲ್ಲಿ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ವಹಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಲಭ್ಯವಿರುವ ಶಾಲಾ ವಾಹನಗಳು, ಖಾಸಗಿ ಬಸ್‍ಗಳು, ಹಾಗೂ ಮ್ಯಾಕ್ಸಿಕ್ಯಾಬ್‍ಗಳ ಸಂಖ್ಯೆ ಮತ್ತು ಸಾರ್ವಜನಿಕ ಬಸ್ ಸಂಚರಿಸುವ ಮಾರ್ಗಗಳ ವಿವರ ಎಲ್ಲವನ್ನೂ ಕ್ರೋಢೀಕರಿಸಿ ಅಗತ್ಯ ಏರ್ಪಾಡುಗಳನ್ನು ಕೈಗೊಳ್ಳಬೇಕು. ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಬಸ್‍ಗಳು ಸಂಚರಿಸುವ ಅಧಿಕ ಪ್ರಯಾಣಿಕರು ಬಳಸುವ ಮಾರ್ಗಗಳ ವಿವರಗಳನ್ನು ಒದಗಿಸಬೇಕು. ಮುಷ್ಕರದ ಅವಧಿಯಲ್ಲಿ ತಾತ್ಕಾಲಿಕವಾಗಿ ಬಸ್‍ಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕುರಿತು ಸೂಕ್ತ ಕ್ರಮ ವಹಿಸಬೇಕು. ಇದಕ್ಕಾಗಿ ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ನೀಲನಕ್ಷೆ ಸಿದ್ಧಪಡಿಸಬೇಕು ಎಂದು ಸೂಚಿಸಿದರು.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ ಮಾತನಾಡಿ, ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಗುತ್ತಿಗೆದಾರರು ಒಪ್ಪಿಕೊಂಡಂತೆ 1,200 ರಸ್ತೆ ವಿಭಜಕಗಳನ್ನು ಅಳವಡಿಸಬೇಕು. ಈ ಸಾಮಗ್ರಿಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ಭಾರೀ ವಾಹನಗಳ ಸಂಚಾರ, ವಾಹನ ದಟ್ಟಣೆ ಮೊದಲಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಹುಬ್ಬಳ್ಳಿ-ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯಸ್ವಾಮಿ ನಾಲ್ವತ್ತವಾಡಮಠ, ಪಶ್ಚಿಮ ಆರ್‍ಟಿಓ ಬಿ. ಶಂಕ್ರಪ್ಪ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಆರ್.ಕೆ. ಮಠದ. ವಾಕರಸಾಸಂ ವಿಭಾಗೀಯ ನಿಯಂತ್ರಕರಾದ ವಿವೇಕಾನಂದ ವಿಶ್ವಜ್ಞ, ಹೆಚ್.ಆರ್. ರಾಮನಗೌಡರ, ಬಸಲಿಂಗಪ್ಪ ಬೀಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.