alex Certify ಯುಗಾದಿಗೆ ಮೊದಲೇ ಬಸ್ ಪ್ರಯಾಣಿಕರಿಗೆ ಶಾಕ್: ಸಾರಿಗೆ ನೌಕರರ ಮುಷ್ಕರ; 23,000 ಬಸ್ ಸಂಚಾರದಲ್ಲಿ ವ್ಯತ್ಯಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುಗಾದಿಗೆ ಮೊದಲೇ ಬಸ್ ಪ್ರಯಾಣಿಕರಿಗೆ ಶಾಕ್: ಸಾರಿಗೆ ನೌಕರರ ಮುಷ್ಕರ; 23,000 ಬಸ್ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾರ್ಚ್ 21 ರಿಂದ 4 ಸಾರಿಗೆ ನಿಗಮಗಳ ನೌಕರರು ಬಸ್ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ಇದರಿಂದ ಯುಗಾದಿ ಹಬ್ಬಕ್ಕೆ ಮೊದಲೇ ರಾಜ್ಯಾದ್ಯಂತ 23,000 ಬಸ್ ಗಳ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಒಮ್ಮತದ ನಿರ್ಣಯ ಕೈಗೊಂಡಿದೆ.

ಮೂಲ ವೇತನಕ್ಕೆ ಬಿ.ಡಿ.ಎ. ವಿಲೀನಗೊಳಿಸಿ ಮೂಲವೇತನವನ್ನು ಶೇಕಡ 25 ರಷ್ಟು ಹೆಚ್ಚಳ ಮಾಡಬೇಕು. ವೇತನ ಹೆಚ್ಚಳ ಪರಿಷ್ಕೃತ ಮೂಲವೇತನದ ಶೇಕಡ 3ರಷ್ಟು ಇರಬೇಕು. ಆಯ್ಕೆ ಶ್ರೇಣಿ ಮತ್ತು ಉನ್ನತ ಶ್ರೇಣಿಗಳ ವೇತನ ಶ್ರೇಣಿಯನ್ನು ಮೇಲಿನಂತೆಯೇ ಸಿದ್ಧಪಡಿಸಬೇಕು. ವೇತನ ಬಡ್ತಿ ದರ ಪರಿಷ್ಕೃತ ಮೂಲವೇತನದ ಶೇಕಡ 3ರಷ್ಟು ಇರಬೇಕು. ಆಯ್ಕೆ ಶ್ರೇಣಿ ಬಡ್ತಿಯನ್ನು ಸೇವಾವಧಿಯ ಪ್ರತಿ 10 ವರ್ಷಕ್ಕೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಎಲ್ಲಾ ನೌಕರರಿಗೆ ಹಾಲಿ ಇರುವ ಬಾಟಾ, ಮಾಸಿಕ ದೈನಂದಿನ ಭತ್ಯೆಗಳನ್ನು 5 ಪಟ್ಟು ಜಾಸ್ತಿ ಮಾಡಬೇಕು. ಹೊಲಿಗೆ ಭತ್ಯೆ, ರೈನ್ ಕೋಟ್ ಗೆ ನೀಡುವ ಮೊತ್ತವನ್ನು ಮೂರು ಪಟ್ಟು ಹೆಚ್ಚಳ ಮಾಡಬೇಕು. ಎಲ್ಲಾ ನಿರ್ವಾಹಕರಿಗೆ ಕ್ಯಾಷಿಯರ್ ಗಳಿಗೆ ಸಮಾನವಾದ ನಗದು ಪ್ರೋತ್ಸಾಹ ಧನ ನೀಡಬೇಕು ಎಂದು ಹೇಳಲಾಗಿದೆ.

2018ರ ಏಪ್ರಿಲ್ ನಲ್ಲಿ ಮುಷ್ಕರ ಕೈಗೊಂಡ ಸಂದರ್ಭದಲ್ಲಿ ಸೇವೆಯಿಂದ ವಜಾಗೊಳಿಸಿದ ನೌಕರರನ್ನು ಷರತ್ತು ಇಲ್ಲದೆ ಮರು ನೇಮಕ ಮಾಡಬೇಕು. ವರ್ಗಾವಣೆ ಶಿಕ್ಷೆಗೆ ಒಳಗಾದ ಸಿಬ್ಬಂದಿ ನೌಕರರನ್ನು ಮೂಲ ಘಟಕಕ್ಕೆ ಮರು ನಿಯೋಜಿಸಬೇಕು. ಎಫ್ಐಆರ್ ದಾಖಲಿಸಿರುವ ನೌಕರರನ್ನು ಕೆಲಸಕ್ಕೆ ವಾಪಸ್ಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಕೆಎಸ್ಆರ್ಟಿಸಿ ಸ್ಟಾಪ್ ಅಂಡ್ ವರ್ಕರ್ಸ್ ಫೆಡರೇಶನ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಶನ್(ಸಿಐಟಿಯು), ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್, ಕೆಎಸ್ಆರ್ಟಿಸಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ನೌಕರರ ಸಂಘ, ಕೆಎಸ್ಆರ್ಟಿಸಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘಗಳನ್ನೊಳಗೊಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...