
ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಬೆಳಗ್ಗೆ 10 ಗಂಟೆಗೆ ಫ್ರೀಡಂ ಪಾರ್ಕ್ ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು.
ಅಲ್ಲದೇ ಜಿಲ್ಲೆಗಳಲ್ಲೂ ಹೋರಾಟ ನಡೆಯಲಿದ್ದು, ಆಯಾ ಜಿಲ್ಲೆಗಳಲ್ಲಿ ಡಿಪೋಗಳ ಎದುರು ಸಾರಿಗೆ ಸಂಸ್ಥೆಯ ಸಿಬ್ಬಂದಿ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಇವತ್ತು ಕೂಡ ಬಸ್ ಬಂದ್ ಆಗುವ ಸಾಧ್ಯತೆ ಇದೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಗಳು ರಸ್ತೆಗಿಳಿಯುವುದಿಲ್ಲ.
ಯೂನಿಯನ್ ನಾಯಕರ ಜೊತೆಗೆ ಸಾರಿಗೆ ಸಚಿವರು ಇಂದು ಸಭೆ ನಡೆಸಲಿದ್ದಾರೆ. ಮುಷ್ಕರ ಹಿಂಪಡೆಯಲು ಮಾಡಿದ ಮನವಿಗೆ ಸಿಬ್ಬಂದಿ ಒಪ್ಪಿಲ್ಲ. ಎರಡು ದಿನ ಬಸ್ ಸಂಚಾರ ನಿಲ್ಲಿಸಿ ಮುಷ್ಕರ ನಡೆಸಿದ್ದ ನೌಕರರು ಸರ್ಕಾರ ತಮ್ಮ ಬೇಡಿಕೆ ಈಡೇರಿಸಲು ಒಪ್ಪದ ಹಿನ್ನೆಲೆಯಲ್ಲಿ ಇಂದು ಕೂಡ ಮುಷ್ಕರ ಮುಂದುವರಿಸಿದ್ದಾರೆ. ಬಸ್ ಗಳಿಲ್ಲದೇ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ಆಕ್ರೋಶ ಹೆಚ್ಚಾಗತೊಡಗಿದೆ.