ಬೆಂಗಳೂರು: ಲಾಕ್ ಡೌನ್ ನಂತರ ಸೋಮವಾರದಿಂದ ರಾಜ್ಯದಲ್ಲಿ ಬಸ್ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರಿಗೆ ಅನುಕೂಲವಾಗಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೆ ಸಾರಿಗೆ ನೌಕರರ ಮುಷ್ಕರ ನಡೆಯುವ ಸಾಧ್ಯತೆ ಇದೆ. ಮುಷ್ಕರ ಆರಂಭವಾದಲ್ಲಿ ಬಸ್ ಪ್ರಯಾಣಿಕರಿಗೆ ತೊಂದರೆಯಾಗಲಿದೆ.
ಜುಲೈ 1 ರಂದು ಸಾರಿಗೆ ನೌಕರರ ಸಭೆ ನಡೆಯಲಿದ್ದು, ನಂತರ ಮುಷ್ಕರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಬೇಡಿಕೆ ಈಡೇರಿಸುವ ಕುರಿತಂತೆ ಸರ್ಕಾರ ಮಾತು ತಪ್ಪಿದ ಹಿನ್ನೆಲೆಯಲ್ಲಿ ಮುಷ್ಕರ ನಡೆಸಲು ಚಿಂತನೆ ನಡೆದಿದೆ. ನಾಲ್ಕು ಸಾರಿಗೆ ನಿಗಮದ 1.30 ಲಕ್ಷ ನೌಕರರು ಮತ್ತು ಅವರ ಕುಟುಂಬದವರು ಬೀದಿಗಿಳಿದು ಮುಷ್ಕರ ನಡೆಸುವ ಚಿಂತನೆ ಇದೆ. ಜುಲೈ 1 ರಂದು ಸಭೆ ನಡೆಯಲಿದ್ದು, ಮುಷ್ಕರದ ನಡೆಸುವ ಕುರಿತಾಗಿ ತೀರ್ಮಾನಕೈಗೊಳ್ಳಲಾಗುವುದು. ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಲಾಗಿದೆ.