ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಬಸ್ ಸಂಚಾರ ಸ್ತಬ್ಧವಾದ ಸಾಧ್ಯತೆ ಇದೆ. ಸಾರಿಗೆ ನೌಕರರ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮತ್ತೆ ಬೀದಿಗೆ ಇಳಿಯಲು ನೌಕರರು ನಿರ್ಧರಿಸಿದ್ದಾರೆ. ಅದೇ ರೀತಿ ರಾಜ್ಯದ ವಿವಿಧ ಕಡೆಗಳಲ್ಲಿ ಬಸ್ ಸಂಚಾರ ಸ್ಥಗಿತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸರ್ಕಾರಕ್ಕೆ ನೀಡಿದ್ದ ಡೆಡ್ಲೈನ್ ಮುಗಿಯುತ್ತಿದ್ದಂತೆ ನೌಕರರು ಮತ್ತೆ ಮುಷ್ಕರ ನಡೆಸಲು ಮುಂದಾಗಿದ್ದಾರೆ. ರಾಜ್ಯ ಸರ್ಕಾರ ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಗರಂ ಆಗಿದ್ದು ಮುಷ್ಕರಕ್ಕೆ ಮುಂದಾಗಿದ್ದಾರೆ.
ಸಾರಿಗೆ ನೌಕರರ ಒಂದು ಬೇಡಿಕೆಯನ್ನು ಕೂಡ ಈಡೇರಿಸದ ಹಿನ್ನೆಲೆಯಲ್ಲಿ ಮಾರ್ಚ್ 2 ರಂದು ಫ್ರೀಡಂ ಪಾರ್ಕ್ ಚಲೋಗೆ ಕರೆ ನೀಡಲಾಗಿದೆ. ಬಿಎಂಟಿಸಿ ನೌಕರರ ಸಂಘದ ಅಧ್ಯಕ್ಷ ಆನಂದ ಈ ಕುರಿತು ಹೇಳಿಕೆ ನೀಡಿದ್ದು, 4 ನಿಗಮದ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಫ್ರೀಡಂ ಪಾರ್ಕ್ ನಲ್ಲಿ ಸಮಾಲೋಚನಾ ಸಭೆ ನಡೆಸಲಾಗುವುದು. ಸಭೆಯಲ್ಲಿ ಮುಷ್ಕರದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.