ಬೆಂಗಳೂರು: ಸಾರಿಗೆ ನೌಕರರಿಗೆ ಭರವಸೆ ನೀಡಿ ಸರ್ಕಾರ ಮಾತು ತಪ್ಪಿದೆ ಎನ್ನುವ ಆರೋಪ ಕೇಳಿಬಂದಿದೆ. ಸಾರಿಗೆ ನೌಕರರ ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಸರಿಯಾಗಿ ಸಂಬಳವಿಲ್ಲದೆ ಸಾರಿಗೆ ನೌಕರರು ಪರದಾಟ ನಡೆಸುವಂತಾಗಿದೆ.
ಫೆಬ್ರವರಿ ತಿಂಗಳು ಬಂದರೂ ಡಿಸೆಂಬರ್ ತಿಂಗಳ ವೇತನ ಪೂರ್ಣ ನೀಡಿಲ್ಲ. ಅರ್ಧವೇತನ ಕೊಟ್ಟು ಸುಮ್ಮನಾಗಿದ್ದಾರೆ. ಜನವರಿ ಸಂಬಳದ ಬಗ್ಗೆ ಸಾರಿಗೆ ನಿಗಮ ಸೈಲೆಂಟಾಗಿದೆ. ಮಕ್ಕಳ ಶಾಲೆಯ ಶುಲ್ಕ ಕಟ್ಟಲು ಸಾರಿಗೆ ನೌಕರರು ಪರದಾಟ ನಡೆಸಿದ್ದಾರೆ.
ಕೋವಿಡ್ ನಂತರ ಗಳಿಕೆ ರಜೆ, ಸಿಎಲ್, ಇಎಲ್ ಮೊದಲಾದ ರಜೆ ಎಂದು ಸಂಬಳ ಕಡಿತ ಮಾಡಲಾಗಿದೆ. ಇದೀಗ ನೌಕರರಿಗೆ ಅರ್ಧವೇತನ ನೀಡುತ್ತಿದ್ದು ಇದರಲ್ಲಿಯೇ ಜೀವನ ನಡೆಸುವಂತಾಗಿದೆ. ಕಂಗಾಲಾದ ನೌಕರರ ಮತ್ತೆ ಹೋರಾಟ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸಾರಿಗೆ ನೌಕರರು ಡಿಸೆಂಬರ್ ನಲ್ಲಿ ಮುಷ್ಕರ ನಡೆಸಿದ್ದರಿಂದ 4 ದಿನ ಬಸ್ ಸಂಚಾರ ಸ್ಥಗಿತಗೊಂಡು ಬಸ್ ಪ್ರಯಾಣಿಕರು ಪರದಾಟ ನಡೆಸುವಂತಾಗಿತ್ತು. ನೌಕರರ ಬೇಡಿಕೆ ಈಡೇರಿಸುವುದಾಗಿ ತಿಳಿಸಿದ್ದ ಸರ್ಕಾರ ಮಾತು ತಪ್ಪಿದ ಹಿನ್ನಲೆಯಲ್ಲಿ ಮತ್ತೆ ಹೋರಾಟ, ಮುಷ್ಕರ ನಡೆಸಲು ಸಾರಿಗೆ ನೌಕರರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.