ಬಾಗಲಕೋಟೆ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳೆಯರ ಓಡಾಟ ಹೆಚ್ಚಾಗಿದೆ. ಇದರಿಂದಾಗಿ ನಷ್ಟದ ಹಾದಿಯಲ್ಲಿದ್ದ ಕೆ.ಎಸ್.ಆರ್.ಟಿ.ಸಿ. ಭರ್ಜರಿ ಲಾಭ ಗಳಿಸಿದೆ.
ಆರಂಭದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಕಿರಿಕಿರಿ ಆದರೂ ಈಗ ಕೆ.ಎಸ್.ಆರ್.ಟಿ.ಸಿ. ಭರ್ಜರಿ ಲಾಭದತ್ತ ಮುನ್ನುಗುತ್ತಿರುವುದು ಸಂತಸ ತಂದಿದೆ. ಮಹಿಳಾ ಪ್ರಯಾಣಿಕರಿಂದಲೇ ಕೆಎಸ್ಆರ್ಟಿಸಿಗೆ ಭಾರಿ ಆದಾಯ ಬರತೊಡಗಿದೆ.
ಬಾಗಲಕೋಟೆ ಜಿಲ್ಲೆ ಒಂದರಲ್ಲಿ ಜೂನ್ 11 ರಿಂದ ಜುಲೈ ಅಂತ್ಯದವರೆಗೆ ಮಹಿಳಾ ಪ್ರಯಾಣಿಕರಿಂದ 27,74,81,000 ರೂಪಾಯಿ ಆದಾಯ ಬಂದಿದೆ. ಇಷ್ಟೊಂದು ಆದಾಯ ಕಂಡು ಕೆಎಸ್ಆರ್ಟಿಸಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಶಕ್ತಿ ಯೋಜನೆ ಜಾರಿಗೆ ಮೊದಲು 2.3 ಲಕ್ಷ ಜನ ಪ್ರಯಾಣಿಸುತ್ತಿದ್ದರು. ಇದರಲ್ಲಿ ಶೇಕಡ 28 ರಷ್ಟು ಮಹಿಳಾ ಪ್ರಯಾಣಿಕರು ಇರುತ್ತಿದ್ದರು. ಶಕ್ತಿ ಯೋಜನೆಯ ನಂತರ 3.22 ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ. ಇವರಲ್ಲಿ 1.85 ಲಕ್ಷ ಮಹಿಳಾ ಪ್ರಯಾಣಿಕರಿದ್ದಾರೆ.
ಶಕ್ತಿ ಯೋಜನೆ ಜಾರಿಗೆ ಮೊದಲು 68 ಲಕ್ಷ ರೂ. ಆದಾಯ ಬರುತ್ತಿತ್ತು. ಶಕ್ತಿ ಯೋಜನೆ ನಂತರ 1.03 ಕೋಟಿ ರೂ. ಆದಾಯ ಬರುತ್ತಿದೆ. ಕೆ.ಎಸ್.ಆರ್.ಟಿ.ಸಿ. ಲಾಭದತ್ತ ಸಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ವಿಭಾಗದಲ್ಲಿ ಬಾಗಲಕೋಟೆ ಜಿಲ್ಲೆ ಅತಿ ಹೆಚ್ಚು ಆದಾಯ ಗಳಿಸಿದೆ ಎಂದು ಹೇಳಲಾಗಿದೆ.