ಬೆಂಗಳೂರು: ಕೆಎಸ್ಆರ್ಟಿಸಿ ಸೇರಿ ಸಾರಿಗೆ ಸಿಬ್ಬಂದಿಗೆ ಅರ್ಧ ಸಂಬಳ ನೀಡಲಾಗುತ್ತಿದೆ. ಸರ್ಕಾರದ ಅನುದಾನ ನಿಲ್ಲಿಸಲಾಗಿದ್ದು, ನಿಗಮಗಳಿಂದಲೇ ವೇತನ ಪಾವತಿಗೆ ಸೂಚನೆ ನೀಡಲಾಗಿದೆ.
1.30 ಲಕ್ಷ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಡಿಸೆಂಬರ್ ತಿಂಗಳಲ್ಲಿ ಅರ್ಥ ವೇತನ ಮಾತ್ರ ನೀಡಲಾಗಿದ್ದು ನಿಗಮಗಳಿಂದಲೇ ವೇತನ ಪಾವತಿ ಮಾಡಬೇಕೆಂದು ತಿಳಿಸಲಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ನಿಗಮಗಳು ತಮ್ಮ ಅಧಿಕಾರಿಗಳು, ಸಿಬ್ಬಂದಿಗೆ ಅರ್ಧವೇತನ ನೀಡಿವೆ.
ಡೀಸೆಲ್ ದರ ಭಾರೀ ಹೆಚ್ಚಳವಾಗಿದೆ. ಪೂರ್ಣಪ್ರಮಾಣದಲ್ಲಿ ಬಸ್ ಸಂಚಾರ ಆರಂಭವಾಗಿಲ್ಲ. ಪ್ರಯಾಣಿಕರು ಕೂಡ ಹೆಚ್ಚಾಗಿ ಬರುತ್ತಿಲ್ಲ. ಇವೇ ಕಾರಣದಿಂದ ನಿಗಮಗಳಿಗೆ ಸಿಬ್ಬಂದಿ ವೇತನದ ಶೇಕಡ 50 ರಷ್ಟು ಸಹಾಯಧನವನ್ನು ಮಾರ್ಚ್ ವರೆಗೂ ನೀಡಬೇಕೆಂದು ಸರ್ಕಾರಕ್ಕೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಮನವಿ ಮಾಡಿದ್ದಾರೆ.
ಸರ್ಕಾರ ನೀಡುತ್ತಿದ್ದ ಅನುದಾನವನ್ನು ಕಳೆದ ಏಪ್ರಿಲ್ ನಿಂದ ನಿಲ್ಲಿಸಿದ್ದು, ನಿಗಮಗಳೇ ವೇತನ ಪಾವತಿಸಬೇಕಿರುವುದರಿಂದ ಸಂಕಷ್ಟ ಎದುರಾಗಿದೆ. ಬಿಎಂಟಿಸಿ, ಕೆಎಸ್ಆರ್ಟಿಸಿ, ಈಶಾನ್ಯ ಮತ್ತು ವಾಯುವ್ಯ ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟದಲ್ಲಿದ್ದು, ನಿರೀಕ್ಷಿತ ಆದಾಯವಿಲ್ಲದೆ ಪೂರ್ಣಪ್ರಮಾಣದಲ್ಲಿ ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ಅನುದಾನ ಬಿಡುಗಡೆಯಾದಲ್ಲಿ ಪೂರ್ಣಪ್ರಮಾಣದ ವೇತನ ನೀಡಲಾಗುವುದು ಎಂದು ಹೇಳಲಾಗಿದೆ.