ಹುಬ್ಬಳ್ಳಿ: ಬೆಂಗಳೂರು ಹೊರತು ಪಡಿಸಿದರೆ ಹುಬ್ಬಳ್ಳಿಯ ಬಸ್ ನಿಲ್ದಾಣವು ದೊಡ್ಡದಾಗಿದೆ. ಈ ಜಾಗವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕಿದೆ. ಈಗ 1 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯ ಲಾಭ ಪಡೆದಿರುತ್ತಾರೆ. ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ 884 ಹೊಸ ಬಸ್ ಖರೀದಿಸಲಾಗುವುದು. ಈಗಾಗಲೇ 375 ಬಸ್ ಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಗೋಕುಲ್ ರಸ್ತೆಯ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಧಾರವಾಡ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ, ಶಂಕು ಸ್ಥಾಪನೆ, ಹುಬ್ಬಳ್ಳಿ ಗೋಕುಲ್ ರಸ್ತೆಯ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಪಲ್ಲಕ್ಕಿ ಬಸ್‌ಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಬೇರೆ ಸಾರಿಗೆ ನಿಗಮಗಳಲ್ಲಿ ನೀಡಲಾಗುವ ಅಪಘಾತ ಪರಿಹಾರ ವಿಮೆಯಂತೆ ಈ ಸಂಸ್ಥೆಯಲ್ಲಿಯೂ ಸಹ 1 ಕೋಟಿ ರೂ. ಅಪಘಾತ ಪರಿಹಾರ ವಿಮೆಯನ್ನು ಹೆಚ್ಚಿಸಬೇಕಾಗಿದೆ. 9 ಸಾವಿರ ಜನರಿಗೆ ಉದ್ಯೋಗ ನೀಡಲಾಗಿದೆ. 3800 ಬಸ್ ಗಳು ಕೋವಿಡ್ ಸಮಯದಲ್ಲಿ ಬಂದ್ ಆಗಿದ್ದವು. ಈಗ ಪುನಃ ಆರಂಭಗೊಂಡಿವೆ. ಇದರಿಂಸ ಶಕ್ತಿ ಯೋಜನೆಗೆ ಬಸ್ ಗಳ ಕೊರತೆ ನೀಗಿದಂತಾಗಿದೆ. ಈ ಭಾಗದ ಜನರಿಗೆ ಹಳೆ ಬಸ್ ಗಳನ್ನು ಕೊಡದೇ ಬ್ರ್ಯಾಂಡ್ ಹೊಸ ಬಸ್ ಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಮಾತನಾಡಿ, 13 ಕೋಟಿ ರೂ. ವೆಚ್ಚದಲ್ಲಿ ಧಾರವಾಡ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ. 23 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣವನ್ನು ನವೀಕರಣಗೊಳಿಸಿ ಮೇಲ್ದರ್ಜೆಗೇರಿಸಲಾಗುವುದು ಎಂದು ಹೇಳಿದರು.