ಬೆಂಗಳೂರು: ಸರ್ಕಾರದ ವಿರುದ್ಧ ರಾಜ್ಯ ಸಾರಿಗೆ ನೌಕರರು ಮತ್ತೆ ಸಿಡಿದೆದ್ದಿದ್ದಾರೆ. ಇಂದಿನಿಂದ ಸಾರಿಗೆ ನೌಕರರು ಬೃಹತ್ ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ.
ಬೆಂಗಳೂರಿನ ನಾಲ್ಕು ನಿಗಮದ ವಿಭಾಗಿಯ ಕಚೇರಿ ಮುಂದೆ ಧರಣಿ ನಡೆಸಲಿದ್ದಾರೆ. ಫ್ರೀಡಂ ಪಾರ್ಕ್ ನಲ್ಲಿ ಬಿಎಂಟಿಸಿ ನೌಕರರು ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ. ಆರು ವರ್ಷ ಕಳೆದರೂ ನೌಕರರ ವೇತನವನ್ನು ಸರ್ಕಾರ ಹೆಚ್ಚಳ ಮಾಡಿಲ್ಲ. ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಹಿಂದೆ ಪ್ರತಿಭಟನೆ ನಡೆಸಲಾಗಿತ್ತು. 2018 ಏಪ್ರಿಲ್ ನಲ್ಲಿ 15 ದಿನ ನೌಕರರು ಮುಷ್ಕರ ಕೈಗೊಂಡಿದ್ದರು. ಈಗ ಮತ್ತೆ ಹೋರಾಟ ಕೈಗೊಂಡಿದ್ದಾರೆ.
ಸಾರಿಗೆ ನೌಕರರ ಹೋರಾಟದಿಂದ ಬಸ್ ಸಂಚಾರದಲ್ಲಿ ವ್ಯತ್ಯಯವಾಗಿ ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಆದರೆ, ಸಾರಿಗೆ ನೌಕರರ ಧರಣಿಯಿಂದ ಪ್ರಯಾಣಿಕರಿಗೆ ಸಮಸ್ಯೆಯಾಗುವುದಿಲ್ಲ ಎಂದು ಕೆಎಸ್ಆರ್ಟಿಸಿ, ಬಿಎಂಟಿಸಿಯಿಂದ ಮಾಧ್ಯಮ ಪ್ರಕಟಣೆ ನೀಡಲಾಗಿದೆ. ಪ್ರಯಾಣಿಕರಿಗೆ ನಿಯಮಿತ ಮತ್ತು ವ್ಯವಸ್ಥಿತ ಸಾರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಸಾರಿಗೆ ವಾಹನ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಲಾಗಿದೆ.