ಬೆಂಗಳೂರು: ವೇತನ ಹಿಂಬಾಕಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಎಸ್ಆರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಸೆ. 12ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯಮಟ್ಟದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ನೌಕರರಿಗೆ 2020ರ ಜನವರಿಯಿಂದ 38 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿಸಬೇಕಿದೆ. ಇದರೊಂದಿಗೆ ನಿವೃತ್ತ ನೌಕರರಿಗೆ ಬಾಕಿ ಇರುವ ಹಣ ಪಾವತಿಗೆ ಸಂಬಂಧಿಸಿದಂತೆ 2024ರ ಜೂನ್ 27ರಂದು ನಿಗಮಗಳ ಆದೇಶದಂತೆ ಬಾಕಿ ಹಣ ಪಾವತಿ ಮಾಡಿಲ್ಲ. ಈ ಎರಡು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ನಿಗಮಗಳ ಅಧಿಕಾರಿಗಳು, ಸಾರಿಗೆ ಸಚಿವರಿಗೆ ಅನೇಕ ಬಾರಿ ಮನವಿ ಮಾಡಲಾಗಿದೆ. ಆದರೆ, ಇದುವರೆಗೆ ಬಾಕಿ ಪಾವತಿಸಿಲ್ಲ.
ಹೀಗಾಗಿ ಹಂತ ಹಂತವಾಗಿ ರಾಜ್ಯಾದ್ಯಂತ ಕಾರ್ಮಿಕ ಸಂಘಟನೆಗಳು ಹೋರಾಟ ಕೈಗೊಂಡಿವೆ. ಮೊದಲ ಹಂತವಾಗಿ ಸೆಪ್ಟೆಂಬರ್ 12ರಂದು ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಸಾವಿರಾರು ನೌಕರರು ಹೋರಾಟದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಇದರಿಂದಾಗಿ ಬಸ್ ಸೇವೆಯಲ್ಲಿ ವ್ಯತ್ಯಯವಾಗುವ ಸಂಭವ ಇದೆ.
ರಾಜ್ಯಮಟ್ಟದ ಪ್ರತಿಭಟನೆ ನಂತರವೂ ಸರ್ಕಾರ, ಸಾರಿಗೆ ನಿಗಮಗಳು ಸ್ಪಂದಿಸದಿದ್ದಲ್ಲಿ ಮುಂದಿನ ಹಂತದ ಹೋರಾಟ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.