ಮಂಗಳೂರು: ರಸ್ತೆ ಗುಂಡಿಯಿಂದಾಗಿ ಬಸ್ ಪ್ರಯಾಣಿಕರೊಬ್ಬರ ಸೊಂಟ ಮುರಿದಿದೆ. ಗಂಭೀರ ಪೆಟ್ಟು ಬಿದ್ದಿರುವ ಪ್ರಯಾಣಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಜಯಕುಮಾರ್ ಗಾಯಗೊಂಡವರು. ಸುಳ್ಯದ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಅವರು ಮಂಗಳೂರಿನಿಂದ ಬೆಳ್ಳಾರೆಗೆ ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ವೇಗವಾಗಿ ಚಲಿಸುತ್ತಿದ್ದ ಬಸ್ ರಸ್ತೆಯಲ್ಲಿದ್ದ ಗುಂಡಿ ಬಸ್ ಇಳಿದು ಮುಂದೆ ಸಾಗಿದೆ. ಬಸ್ ಗುಂಡಿಗೆ ಬಿದ್ದ ರಭಸಕ್ಕೆ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ವಿಜಯಕುಮಾರ್ ಮೇಲಕ್ಕೆ ಎಗರಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಸೀಟಿನ ರಾಡ್ ಸೊಂಟಕ್ಕೆ ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೊಂಟದಿಂದ ಕೆಳಭಾಗದ ಸ್ಪರ್ಶ ಕಳೆದುಕೊಂಡಿದ್ದಾರೆ.
ಅವರಿಗೆ ಬೆನ್ನುಹುರಿ ಮತ್ತು ಕುತ್ತಿಗೆ ಸಮೀಪ ಎಲುಬು ಜಖಂಗೊಂಡಿದೆ. ವಿಜಯಕುಮಾರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಶಸ್ತ್ರಚಿಕಿತ್ಸೆ ಮಾಡಬೇಕಿದೆ. ರಸ್ತೆಯ ಗುಂಡಿಗಳು ಮತ್ತು ಬಸ್ ಚಾಲಕನ ನಿರ್ಲಕ್ಷದ ಚಾಲನೆಯೇ ಈ ಅವಘಡಕ್ಕೆ ಘಟನೆಗೆ ಕಾರಣವೆನ್ನಲಾಗಿದೆ. ಬಂಟ್ವಾಳ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.