ಶಿವಮೊಗ್ಗ: ಕೆಎಸ್ಆರ್ಟಿಸಿ ಬಸ್ ನಲ್ಲಿ ಬಿಟ್ಟು ಹೋದ 30,000 ರೂಪಾಯಿ ಇದ್ದ ಬ್ಯಾಗ್ ಮಹಿಳೆಗೆ ಹಿಂತಿರುಗಿಸುವ ಮೂಲಕ ಬಸ್ ನಿರ್ವಾಹಕರೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿ ಕೆಎಸ್ಆರ್ಟಿಸಿ ಬಸ್ ನಲ್ಲಿ ಬಂಡಿಗುಡ್ಡ ಗ್ರಾಮದಿಂದ ಆಯೆಶಾ ಅವರು ಪ್ರಯಾಣಿಸಿದ್ದು, ಬಸ್ ಇಳಿಯುವ ಸಂದರ್ಭದಲ್ಲಿ ಹಣವಿದ್ದ ಚೀಲ ಬಿಟ್ಟು ಹೋಗಿದ್ದಾರೆ. ಆ ಬ್ಯಾಗ್ ಬಸ್ ನಿರ್ವಾಹಕ ರವಿ ಅವರಿಗೆ ಸಿಕ್ಕಿದೆ. ಹಣ ಕಳೆದುಕೊಂಡ ಮಹಿಳೆಯನ್ನು ಪತ್ತೆ ಮಾಡಿದ ಅವರು ಭದ್ರಾವತಿ ಮುಖ್ಯ ಬಸ್ ನಿಲ್ದಾಣದಲ್ಲಿ ಸರ್.ಎಂ. ವಿಶ್ವೇಶ್ವರಯ್ಯನವರ ಪ್ರತಿಮೆ ಬಳಿ ಹಿಂತಿರುಗಿಸಿದ್ದಾರೆ.
ಕಂಡಕ್ಟರ್ ರವಿ, ಚಾಲಕ ರಾಜು ಮತ್ತು ಸಂಚಾರಿ ನಿಯಂತ್ರಕ ಪುರುಷೋತ್ತಮ್ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದು, ಸಿಬ್ಬಂದಿ ವರ್ಗದವರನ್ನು ಭದ್ರಾವತಿ ಕೆಎಸ್ಆರ್ಟಿಸಿ ಘಟಕದಿಂದ ಅಭಿನಂದಿಸಲಾಗಿದೆ.