ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ಗಳಲ್ಲಿ ಜನವರಿ 1ರಿಂದ 50 ರೂಪಾಯಿ ಮೇಲ್ಪಟ್ಟು ಟಿಕೆಟ್ ಖರೀದಿಸುವ ಪ್ರಯಾಣಿಕರಿಂದ ಒಂದು ರೂಪಾಯಿ ಹೆಚ್ಚುವರಿಯಾಗಿ ಸಂಗ್ರಹಿಸಲಾಗುತ್ತಿದೆ. ಹೆಚ್ಚುವರಿಯಾಗಿ ಪಡೆದ ಒಂದು ರೂಪಾಯಿಯನ್ನು ಅಪಘಾತ ವಿಮೆಗೆ ಬಳಸಲಾಗುವುದು.
ಅಪಘಾತ ಪರಿಹಾರ ಮೊತ್ತವನ್ನು 3 ಲಕ್ಷ ರೂ.ಗಳಿಂದ 10 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ನಿಗಮದ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ದುರಾದೃಷ್ಟವಶಾತ್ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್ ವತಿಯಿಂದ ನೀಡಲಾಗುತ್ತಿರುವ ಆರ್ಥಿಕ ಪರಿಹಾರ ಮೊತ್ತವನ್ನು 10 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
ಜನವರಿ 1ರಿಂದ ಇದು ಜಾರಿಯಾಗಿದ್ದು, ಪ್ರಯಾಣಿಕರಿಂದ ಒಂದು ರೂಪಾಯಿ ಹೆಚ್ಚುವರಿಯಾಗಿ ಸಂಗ್ರಹಿಸಲಾಗುತ್ತಿದೆ. ಟಿಕೆಟ್ ದರ ಹೆಚ್ಚಳ ಮಾಡಿಲ್ಲ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
50 ರೂಪಾಯಿಯಿಂದ 99 ರೂಪಾಯಿವರೆಗಿನ ಟಿಕೆಟ್ ಪಡೆದು ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಂದ ತಲಾ ಒಂದು ರೂಪಾಯಿ ಸಂಗ್ರಹಿಸಲಾಗುವುದು. 100 ರೂಪಾಯಿ ಹಾಗೂ ಮೇಲ್ಪಟ್ಟ ಬೆಲೆಯ ಟಿಕೆಟ್ ಪಡೆದು ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಂದ ತಲಾ ಎರಡು ರೂಪಾಯಿ ಅಪಘಾತ ಪರಿಹಾರ ನಿಧಿ ವಂತಿಕೆ ಸಂಗ್ರಹಿಸಲಾಗುತ್ತಿದೆ. ಈ ಹಿಂದೆ 100 ರೂಪಾಯಿ ಮುಖಬೆಲೆಯ ಟಿಕೆಟ್ ಪಡೆದು ಪ್ರಯಾಣಿಸುವ ಪ್ರಯಾಣಿಕರಿಂದ ಒಂದು ರೂಪಾಯಿ ಅಪಘಾತ ಪರಿಹಾರ ನಿಧಿವಂತಿಕೆ ಸಂಗ್ರಹಿಸಲಾಗುತ್ತಿತ್ತು.