
ಬೆಂಗಳೂರು: ರಾತ್ರಿ ಸೇವೆ ಮತ್ತು ದೂರದ ಮಾರ್ಗಗಳಿಗೆ ಚಾಲಕರನ್ನು ಕರ್ತವ್ಯಕ್ಕೆ ಕಳುಹಿಸುವ ಮೊದಲು ಕನಿಷ್ಠ 9 ಗಂಟೆಗಳ ಕಾಲ ವಿಶ್ರಾಂತಿ ನೀಡುವಂತೆ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಕೆಎಸ್ಆರ್ಟಿಸಿ ಬಸ್ ಅಪಘಾತಕ್ಕೆ ಚಾಲಕರ ಮೇಲಿನ ಕಾರ್ಯದೊತ್ತಡವೂ ಕಾರಣ ಎನ್ನುವುದನ್ನು ಮನಗಂಡಿರುವ ನಿಗಮದ ಆಡಳಿತ ಮಂಡಳಿ ಈ ನಿಟ್ಟಿನಲ್ಲಿ ಚಾಲಕರಿಗೆ ವಿಶ್ರಾಂತಿಗೆ ಸೂಚನೆ ನೀಡಿದೆ. ಕೆಎಸ್ಆರ್ಟಿಸಿ ಬಸ್ ಗಳಿಂದ ಉಂಟಾಗಿರುವ ಅಪಘಾತ ಪ್ರಕರಣ ವಿಶ್ಲೇಷಣೆ ಸಭೆಯಲ್ಲಿ ಚಾಲಕರ ಮೇಲೆ ಆಗುತ್ತಿರುವ ಕಾರ್ಯದೊತ್ತಡ ಕುರಿತಾಗಿ ಚರ್ಚೆ ನಡೆಸಿದೆ.
ವಿಶ್ರಾಂತಿ ಇಲ್ಲದೆ ಮೇಲಿಂದ ಮೇಲೆ ಚಾಲಕರನ್ನು ಕರ್ತವ್ಯಕ್ಕೆ ನಿಯೋಜಿಸುವುದರಿಂದ ಸುಸ್ತಾಗುತ್ತಾರೆ. ಇದು ಅಪಘಾತಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಚಾಲಕರಿಗೆ ನಿಯಮಿತವಾಗಿ ವಿಶ್ರಾಂತಿ ನೀಡಲು ಎಲ್ಲಾ ವಿಭಾಗ ನಿಯಂತ್ರಣಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಹೇಳಲಾಗಿದೆ.