ತಿಪಟೂರು: ಕೆಎಸ್ಆರ್ಟಿಸಿ ಬಸ್ ನಲ್ಲಿ ಮೂರ್ಛೆ ಹೋಗಿ ರಕ್ತಸ್ರಾವದ ಪ್ರಯಾಣಿಕನನ್ನು ಬಸ್ ನಲ್ಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಮೂಲಕ ಚಾಲಕ ನಿರ್ವಾಹಕ ಮಾನವೀಯತೆ ಮೆರೆದಿದ್ದಾರೆ.
ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಭದ್ರಾವತಿ ಘಟಕದ ಕೆಎಸ್ಆರ್ಟಿಸಿ ಬಸ್ ತಿಪಟೂರು ನಿಲ್ದಾಣಕ್ಕೆ ಬಂದ ವೇಳೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದರು. ಬೆಂಗಳೂರಿಗೆ ತೆರಳುತ್ತಿದ್ದ ಈಶ್ವರ ರೆಡ್ಡಿ ಎಂಬುವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಬಸ್ ನಲ್ಲಿಯೇ ಮೂರ್ಛೆ ಹೋಗಿದ್ದಾರೆ. ಉಸಿರಾಡಲು ಆಗದೆ ತೊಂದರೆಗೊಳಗಾದ ಅವರ ಬಾಯಿಯಿಂದ ನೊರೆ ಹಾಗೂ ರಕ್ತ ಬರಲಾರಂಭಿಸಿದೆ.
ಕೂಡಲೇ ನಿರ್ವಾಹಕ ಓಂಕಾರ್ ಮತ್ತು ಚಾಲಕ ಪ್ರಕಾಶ್ ಅವರು ಬಸ್ ನಲ್ಲಿದ್ದ ಇತರೆ ಪ್ರಯಾಣಿಕರನ್ನು ಇಳಿಸಿ ಬಸ್ ಅನ್ನು ತಿಪಟೂರಿನ ಸಾರ್ವಜನಿಕ ಆಸ್ಪತ್ರೆಗೆ ತಂದಿದ್ದಾರೆ. ಈಶ್ವರ ರೆಡ್ಡಿ ಅವರಿಗೆ ಚಿಕಿತ್ಸೆ ಕೊಡಿಸಿದ್ದು ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತ ಕಾರಣ ಈಶ್ವರ ರೆಡ್ಡಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಬಸ್ ಪ್ರಯಾಣಿಕರು ಕಷ್ಟದಲ್ಲಿರುವಾಗ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದು ಮೆಚ್ಚುಗೆಗೆ ಪಾತ್ರವಾದ ಬಸ್ ಚಾಲಕ ಪ್ರಕಾಶ್ ಮತ್ತು ನಿರ್ವಾಹಕ ಓಂಕಾರ್ ಹೇಳಿದ್ದಾರೆ. ನನಗೆ ಪುನರ್ಜನ್ಮ ದೊರೆತಿದೆ ಎಂದು ಪ್ರಯಾಣಿಕ ಈಶ್ವರ ರೆಡ್ಡಿ ಹೇಳಿದ್ದು, ಚಾಲಕ ಮತ್ತು ನಿರ್ವಾಹಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.