
ತುಮಕೂರು: ಶಕ್ತಿ ಯೋಜನೆಯಡಿ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದರೂ ಮಹಿಳಾ ಪ್ರಯಾಣಿಕರನ್ನು ಬಸ್ ಗೆ ಹತ್ತಿಸಿಕೊಳ್ಳಲು ಕೆಲವು ಬಸ್ ಚಾಲಕರು, ನಿರ್ವಾಹಕರು ಹಿಂದೇಟು ಹಾಕುತ್ತಿದ್ದಾರೆ.
ಮಹಿಳಾ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೆ ತೆರಳುತ್ತಿದ್ದ ಬಸ್ ಗಳನ್ನು ತಡೆಯಲು ಮುಂದಾದ ಮಹಿಳೆಯರ ಮೇಲೆಯೇಗೆ ಬಸ್ ಹತ್ತಿಸಲು ಚಾಲಕ ಯತ್ನಿಸಿದ ಘಟನೆ ಕೊರಟಗೆರೆ ಕ್ಷೇತ್ರದ ಗೊರವನಹಳ್ಳಿ ಕ್ರಾಸ್ ಬಳಿ ನಡೆದಿದೆ.
ಕೊಳ್ಳೇಗಾಲದಿಂದ ಗೊರವನಹಳ್ಳಿ ಮಹಾಲಕ್ಷ್ಮಿ ದರ್ಶನಕ್ಕೆ ಬಂದಿದ್ದ ಮಹಿಳೆಯರು ಮತ್ತು ಮಕ್ಕಳು ದರ್ಶನ ಮುಗಿಸಿ ವಾಪಸ್ ತೆರಳುವಾಗ ಗೊರವನಹಳ್ಳಿ ಕ್ರಾಸ್ ಬಳಿ ಎರಡು ಗಂಟೆ ಕಾದರೂ ಬಸ್ ಗಳನ್ನು ನಿಲ್ಲಿಸುತ್ತಿರಲಿಲ್ಲ. ಇದರಿಂದ ಆಕ್ರೋಶಗೊಂಡ ಮಹಿಳೆಯರು ಬಸ್ ಗೆ ಅಡ್ಡಲಾಗಿ ನಿಂತು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಬಸ್ ಚಾಲಕ ಮಹಿಳೆಯರ ಮೇಲೆಯೇ ಬಸ್ ಹರಿಸಲು ಮುಂದಾಗಿದ್ದಾನೆ.
ಇದನ್ನು ಗಮನಿಸಿದ ತಹಶೀಲ್ದಾರ್ ಜೀಪ್ ಅನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ 15ಕ್ಕೂ ಹೆಚ್ಚು ಮಹಿಳೆಯರನ್ನು ಬಸ್ ಗೆ ಹತ್ತಿಸಿ ಕಳುಹಿಸಿದ್ದಾರೆ. ಮಹಿಳೆಯರ ಮೇಲೆ ಬಸ್ ಹತ್ತಿಸಲು ಯತ್ನಿಸಿದ ಚಾಲಕನನ್ನು ತನಿಖೆ ನಡೆಸಿ ಅಮಾನತು ಮಾಡಲು ಸೂಚಿಸಿದ್ದಾರೆ. ಕೊರಟಗೆರೆ ಮತ್ತು ನಾಗೇನಹಳ್ಳಿಯಲ್ಲಿ ಟಿ.ಸಿ. ಪಾಯಿಂಟ್ ಮಾಡಿದ್ದು, ಎರಡು ಕಡೆಯೂ ಬಸ್ ಬಂದ ಬಗ್ಗೆ ಎಂಟ್ರಿ ಪಡೆಯಬೇಕು ಎಂದು ಸೂಚನೆ ನೀಡಲಾಗಿದೆ. ಮಹಿಳಾ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವಂತೆ ತಿಳಿಸಲಾಗಿದೆ ಎಂದು ಕೊರಟಗೆರೆ ತಹಶೀಲ್ದಾರ್ ಮುನಿಸ್ವಾಮಿ ಹೇಳಿದ್ದಾರೆ.