ಚಿತ್ರದುರ್ಗ: ಆಕಸ್ಮಿಕವಾಗಿ ಬಸ್ ಟಿಕೆಟ್ ಕಳೆದುಕೊಂಡ ಮಹಿಳೆಯನ್ನು ಕೆಎಸ್ಆರ್ಟಿಸಿ ಬಸ್ ನಿಂದ ಕೆಳಗಿಳಿಸಿದ ಅಮಾನವೀಯ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಬಳಿ ಬುಧವಾರ ನಡೆದಿದೆ.
ಹೊಸದುರ್ಗ ತಾಲೂಕಿನ ಸಾಲಕಟ್ಟೆ ಸಮುದಾಯ ಆರೋಗ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಚೈತ್ರಾ ಈ ಸಂಬಂಧ ಹೊಸದುರ್ಗ ಕೆಎಸ್ಆರ್ಟಿಸಿ ಘಟಕಕ್ಕೆ ದೂರು ನೀಡಿದ್ದಾರೆ. ಆಕಸ್ಮಿಕವಾಗಿ ಟಿಕೆಟ್ ಕಳೆದುಕೊಂಡ ಕಾರಣಕ್ಕೆ ಮತ್ತೆ ಟಿಕೆಟ್ ಕೊಡದೆ ಕೆಎಸ್ಆರ್ಟಿಸಿ ಬಸ್ ನಿಂದ ಚೈತ್ರಾ ಅವರನ್ನು ರಸ್ತೆಯಲ್ಲಿಯೇ ಕೆಳಗಿಳಿಸಲಾಗಿದೆ.
ಸಾಲಕಟ್ಟೆ ಗೇಟ್ ನಿಂದ ಹೊಸದುರ್ಗ ತಾಲೂಕು ಶ್ರೀರಾಂಪುರಕ್ಕೆ ಕೆಎಸ್ಆರ್ಟಿಸಿ ಬಸ್ ನಲ್ಲಿ ಬುಧವಾರ ಸಂಜೆ 4:30ಕ್ಕೆ ಚೈತ್ರಾ ಪ್ರಯಾಣಿಸಿದ್ದಾರೆ. ಹುಳಿಯಾರು ಬಸ್ ನಿಲ್ದಾಣದ ಬಳಿ ಚೈತ್ರಾ ಅವರ ಕೈಯಲ್ಲಿದ್ದ ಟಿಕೆಟ್ ಕೈತಪ್ಪಿ ಬಸ್ ನಿಂದ ಹೊರಗೆ ಬಿದ್ದಿದೆ. ಈ ಬಗ್ಗೆ ಕಂಡಕ್ಟರ್ ಗೆ ತಿಳಿಸಿದ್ದಾರೆ.
ಅಷ್ಟರಲ್ಲಾಗಲೇ ಹುಳಿಯಾರು ಪಟ್ಟಣ ಬಿಟ್ಟು ಬಸ್ ಮುಂದೆ ಬಂದಿದೆ. ಚೈತ್ರಾ ಅವರು ಇನ್ನೊಂದು ಟಿಕೆಟ್ ಕೊಡಿ ಎಂದು ಕೇಳಿದ್ದು, ಹಾಗೆಲ್ಲ ಕೊಡಲು ಬರುವುದಿಲ್ಲ ಎಂದು ಕಂಡಕ್ಟರ್ ತಿಳಿಸಿದ್ದಾರೆ. ಶಕ್ತಿ ಯೋಜನೆಯ ಉಚಿತ ಟಿಕೆಟ್ ಬೇಡ ಹಣ ಪಾವತಿಸುತ್ತೇನೆ, ಟಿಕೆಟ್ ನೀಡಿ ಎಂದು ಕೇಳಿದಾಗ ಕೋಪಗೊಂಡ ಕಂಡಕ್ಟರ್ ಏರು ಧ್ವನಿಯಲ್ಲಿ ಬೈದು ಹುಳಿಯಾರು ಪಟ್ಟಣದ ಹೊರ ವಲಯದಲ್ಲಿ ಕೆಳಗಿಳಿಸಿದ್ದಾರೆ ಎಂದು ಚೈತ್ರಾ ದೂರು ನೀಡಿದ್ದಾರೆ.
ನಂತರ ಚೈತ್ರಾ ಖಾಸಗಿ ಬಸ್ ನಲ್ಲಿ ಹೊಸದುರ್ಗಕ್ಕೆ ಆಗಮಿಸಿ ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕರಿಗೆ ಲಿಖಿತ ದೂರು ನೀಡಿದ್ದಾರೆ.