ಬೆಂಗಳೂರು: ರಾಜ್ಯದಲ್ಲಿ ನಿನ್ನೆಯಿಂದ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಮಹಿಳೆಯರು ಮುಗಿಬಿದ್ದಿದ್ದಾರೆ. ಆಟೋ, ಕಾರ್, ದ್ವಿಚಕ್ರವಾಹನ, ಮೆಟ್ರೋ ಬಿಟ್ಟು ಸರ್ಕಾರಿ ಬಸ್ ಗಳ ಮೊರೆ ಹೋಗಿದ್ದಾರೆ. ಬಿಎಂಟಿಸಿ ಬಸ್ ಗಳಲ್ಲಿ ಬೆಳಗ್ಗೆಯಿಂದಲೇ ಮಹಿಳೆಯರ ಸಂಚಾರ ಹೆಚ್ಚಾಗಿದೆ.
ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಮಹಿಳೆಯರಿಗೆ ಉಚಿತ ಪ್ರಯಾಣದ ಟಿಕೆಟ್ ನೀಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಮಹಿಳೆಯರು ಉಚಿತ ಪ್ರಯಾಣಕ್ಕೆ ಮುಗಿಬಿದ್ದಿದ್ದಾರೆ.
ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ನಿನ್ನೆಯಿಂದಲೇ ಮಹಿಳೆಯರ ಉಚಿತ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಗಾರ್ಮೆಂಟ್ಸ್ ಗೆ ತೆರಳುವ ಮಹಿಳೆಯರು, ಐಟಿಬಿಟಿ ಉದ್ಯೋಗಿಗಳು ಹಾಗೂ ವಿವಿಧ ಕೆಲಸ ಕಾರ್ಯಗಳಿಗೆ ತೆರಳುವ ಮಹಿಳೆಯರು ಕೂಡ ಸರ್ಕಾರಿ ಬಸ್ ಗಳನ್ನು ಅವಲಂಬಿಸಿದ್ದಾರೆ. ಉಚಿತ ಬಸ್ ಪ್ರಯಾಣ ಆರಂಭವಾಗಿದ್ದರಿಂದ ಧರ್ಮಸ್ಥಳಕ್ಕೆ ಹೆಚ್ಚಿನ ಸಂಖ್ಯೆಯ ಮಹಿಳೆಯರು ತೆರಳಿದ್ದಾರೆ. ರಾಜ್ಯದ ವಿವಿಧೆಡೆ ಮಹಿಳೆಯರ ಸಂಚಾರ ಹೆಚ್ಚಾಗಿದ್ದು, ಕೆಲವೆಡೆ ಬಸ್ ಗಳು ಲಭ್ಯವಿಲ್ಲದೆ ಸಾರಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಹೆಚ್ಚಿನ ಸಂಖ್ಯೆಯ ಬಸ್ ಗಳನ್ನು ಬಿಡುವಂತೆ ಒತ್ತಾಯಿಸಲಾಗಿದೆ. ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.