ಯುಪಿಎಸ್ಸಿ ನಡೆಸಿದ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಪಿಎಸ್ ಹುದ್ದೆ ಅಲಂಕರಿಸಲು ಹೊರಟಿರುವ ಸರ್ಕಾರಿ ಬಸ್ ಚಾಲಕನ ಮಗನ ಯಶೋಗಾಥೆ ಇದು.
ಅನುರಾಗ್ ದಾರು ಭಾಲ್ಕಿಯವರು, ಬೀದರ್ನ ಜಿಲ್ಲಾ ಕೇಂದ್ರದಲ್ಲಿ ಬೆಳೆದವರು. ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 569ನೇ ರ್ಯಾಂಕ್ ಗಳಿಸಿದ ನಂತರ ಇದೀಗ ಐಪಿಎಸ್ ಹುದ್ದೆಗೇರುತ್ತಿದ್ದಾರೆ.
ಈ ಸಾಧನೆ ಮಾಡಿದ್ದಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಭಿನಂದನಾ ಸಮಾರಂಭ ಆಯೋಜಿಸಿತ್ತು. ಅಲ್ಲಿ ಸಂಸ್ಥೆ ಅಧ್ಯಕ್ಷ ಎಂ. ಚಂದ್ರಪ್ಪ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಅವರು ಅನುರಾಗ್ ಮತ್ತವರ ತಂದೆ ಮಾಣಿಕ್ ರಾವ್ ಮತ್ತು ತಾಯಿ ಕಾಶಿಬಾಯಿರನ್ನು ಸನ್ಮಾನಿಸಿದರು.
ಅನುರಾಗ್ ದಾರು ತಂದೆ ಬೀದರ್ ವಿಭಾಗದ ಬಾಲ್ಕಿ ಡಿಪೋದಲ್ಲಿ ಕೆಎಸ್ಆರ್ಟಿಸಿಯಲ್ಲಿ ಚಾಲಕರಾಗಿದ್ದಾರೆ.
ಅನುರಾಗ್ ದಾರು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ನಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆದಿದ್ದು, ಐದನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ನನ್ನ ಪ್ರಯಾಣದಲ್ಲಿ ಏರಿಳಿತಗಳಿತ್ತು, 2017 ರಿಂದಲೂ ಪ್ರಯತ್ನಿಸುತ್ತಿದ್ದೇನೆ. ಐದನೇ ಪ್ರಯತ್ನದಲ್ಲಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.