ಬೆಂಗಳೂರು: ಟಿಕೆಟ್ ಸಮಸ್ಯೆ ಬಗ್ಗೆ ಪ್ರಯಾಣಿಕರೊಬ್ಬರು ಹೇಳಲು ಮುಂದಾಗಿದ್ದ ವೇಳೆ ಕೆ ಎಸ್ ಆರ್ ಟಿಸಿ ಸಿಬ್ಬಂದಿ ಅಮಾನುಷವಾಗಿ ನಡೆದುಕೊಂಡಿದ್ದು, ಲಾಠಿಯಿಂದ ಹೊಡೆದು, ಎದೆಗೆ ಒದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪ್ರಯಾಣಿಕ ಟಿಕೆಟ್ ವಿಚಾರದಲ್ಲಿ ಆಗಿರುವ ಸಮಸ್ಯೆ ಬಗ್ಗೆ ಕೇಳಲು ಹೋಗಿದ್ದ. ಈ ವೇಳೆ ಕೆ ಎಸ್ ಆರ್ ಟಿಸಿ ಸಿಬ್ಬಂದಿಗಳು ಅಮಾನವೀಯವಾಗಿ ನಡೆದುಕೊಂಡಿದ್ದಲ್ಲದೇ ಕೊಲೆ ಬೆದರಿಕೆಯನ್ನು ಹಾಕಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕೆ ಎಸ್ ಆರ್ ಟಿಸಿ ವ್ಯವಸ್ಥಪಕ ಹಾಗೂ ಭದ್ರತಾ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಹಿರಿಯೂರು ಮೂಲದ ರಾಘವೇಂದ್ರ ಎನ್ನುವವರು ದೂರು ನೀಡಿದ್ದಾರೆ. ಡಿ.23ರಂದು ರಾತ್ರಿ ಬೆಂಗಳೂರಿನಿಂದ ಹಿರಿಯೂರಿಗೆ ಹೊರಟಿದ್ದ ವ್ಯಾಪಾರಿ ರಾಘವೇಂದ್ರ, ಹರಿಹರ ಬಸ್ ಹತ್ತಿದ್ದರು. ಹಿರಿಯೂರಿಗೆ ತಿಕೆಟ್ ಕೊಡುವಂತೆ ಕೇಳಿದ್ದರು. ಆದರೆ ಹಿರಿಯೂರು ಒಳಗೆ ಬಸ್ ಹೋಗಲ್ಲ. ರಾಷ್ಟ್ರೀಯ ಹೆದ್ದಾರಿ ಮೂಲಕ ಹೋಗುತ್ತೆ ಎಂದು ಕಂಡಕ್ಟರ್ ಹೇಳಿದ್ದಾರೆ. ಹಿರಿಯೂರಿಗೆ ಟಿಕೆಟ್ ನೀಡಿ. ರಾಷ್ಟ್ರೀಯ ಹೆದ್ದಾರಿ ಬಳಿಯೇ ಇಳಿದುಕೊಳ್ಳುತ್ತೇನೆ ಎಂದಿದ್ದಾರೆ.
ಚಿತ್ರದುರ್ಗದ ಟಿಕೆಟ್ ಪಡೆದರೆ ಮಾತ್ರ ಹಿರಿಯೂರಿನಲ್ಲಿ ಇಳಿಸುತ್ತೇನೆ ಎಂದು ಕಂಡಕ್ಟರ್ ಹೇಳಿದ್ದಾರೆ. ಹಿರಿಯೂರಿಗೆ ಹೋಗಬೇಕಾದ ನಾನು ಚಿತ್ರದುರ್ಗಕ್ಕೆ ಯಾಕೆ ಟಿಕೆಟ್ ಪಡೆಯಲಿ? ಎಂದು ಕೇಳಿದ್ದಾರೆ. ಈ ವೇಳೆ ವಾಗ್ವಾದ ಆರಂಭವಾಗಿದೆ. ಇದನ್ನು ವಿಡಿಯೋ ಮಾಡಲು ರಾಘವೇಂದ್ರ ಮುಂದಾಗಿದ್ದರು. ಈ ವೇಳೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಸತೀಶ್ ಎಂಬಾತ ರಾಘವೇಂದ್ರ ಅವರಿಗೆ ಲಾಠಿಯಿಂದ ಹೊಡೆದಿದ್ದು, ಕಾಲಿನಿಂದ ಎದೆಗೆ ಒದ್ದು ಎಳೆದಾಡಿದ್ದಾರೆ, ಅಲ್ಲದೇ ನಾನು ಹಿರಿಯೂರಿನವ. ಅಲ್ಲಿ ನನ್ನ ಅಣ್ಣ ರೌಡಿ. ನಿನ್ನ ಕೊಲೆ ಮಾಡಿಸುತ್ತೇನೆ ಎಂದು ಬೆದರಿಕೆಹಾಕಿದ್ದಾರೆ ಎಂದು ರಾಘವೇಂದ್ರ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಘವೇಂದ್ರ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಕೆ ಎಸ್ ಆರ್ ಟಿಸಿ ಡಿಪೋ ವ್ಯವಸ್ಥಾಪಕ ಹಾಗೂ ಭದ್ರತಾ ಸಿಬ್ಬಂದಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
KSRTC employees lathi passenger,FIR