
ಬೆಂಗಳೂರು: ಕೇಂದ್ರ ಸರ್ಕಾರದ ಪಿಎಂ ಇ- ಡ್ರೈವ್ ಯೋಜನೆಯಡಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಇನ್ನಷ್ಟು ಎಲೆಕ್ಟ್ರಿಕ್ ಬಸ್ ಗಳನ್ನು ನೀಡಲು ಒಪ್ಪಿಗೆ ಸೂಚಿಸಲಾಗಿದೆ.
ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ನಿಗಮಗಳಿಗೆ ಶೀಘ್ರವೇ 750 ಎಲೆಕ್ಟ್ರಿಕ್ ಬಸ್ ಗಳು ಸೇರ್ಪಡೆಯಾಗಲಿವೆ. 2023 -24, 2024 -25ನೇ ಸಾಲಿನಲ್ಲಿ 4300ಕ್ಕೂ ಹೆಚ್ಚು ಬಸ್ ಗಳು ನಿಗಮಕ್ಕೆ ಸೇರ್ಪಡೆಯಾಗುತ್ತಿದ್ದು, ಇವುಗಳಲ್ಲಿ 1000ಕ್ಕೂ ಹೆಚ್ಚಿನ ಎಲೆಕ್ಟ್ರಿಕ್ ಬಸ್ ಗಳು ಸೇರ್ಪಡೆಯಾಗುತ್ತಿದೆ. ಇದೀಗ ಮತ್ತೆ ಕೇಂದ್ರ ಸರ್ಕಾರ ಪಿಎಂ ಇ- ಡ್ರೈವ್ ಯೋಜನೆ ಅಡಿ ರಾಜ್ಯ ಸಾರಿಗೆ ಸಂಸ್ಥೆಗೆ 750 ಎಲೆಕ್ಟ್ರಿಕ್ ಬಸ್ ಗಳ ಪೂರೈಕೆಗೆ ಅನುಮೋದನೆ ನೀಡಿದೆ.
ಕೆಎಸ್ಆರ್ಟಿಸಿ, ಕೆಕೆಆರ್ಟಿಸಿ, ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ.ಗಳಿಗೆ ಜಿಸಿಸಿ(ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್) ಆಧಾರದಲ್ಲಿ ಈ ಬಸ್ ಗಳನ್ನು ಸೇರ್ಪಡೆ ಮಾಡಲಾಗುವುದು. ಹೀಗೆ ಸೇರ್ಪಡೆಯಾದ ಬಸ್ ಳ ಒಡೆತನ ಮಾತ್ರ ನಿಗಮಗಳಿಗೆ ಇರುವುದಿಲ್ಲ.
ಕೇಂದ್ರ ಸರ್ಕಾರ ಪಿಎಂ ಇ ಡ್ರೈವ್ ಅಡಿ ಬಸ್ ಗಳ ಖರೀದಿಗೆ ಹಣ ನೀಡುವುದಿಲ್ಲ. ಬಸ್ ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ಆರ್ಥಿಕ ನೆರವು ನೀಡುತ್ತದೆ. ಬಸ್ ಗಳನ್ನು ಪೂರೈಸುವ ಸಂಸ್ಥೆಗಳಿಗೆ ಸಬ್ಸಿಡಿ ಮೂಲಕ ಹಣ ನೀಡಲಿದ್ದು, ನಂತರ ಬಸ್ ಗಳನ್ನು ಪಡೆಯುವ ನಿಗಮಗಳು ಬಸ್ ಪೂರೈಸುವ ಸಂಸ್ಥೆಗೆ ಕಿಲೊಮಿಟರ್ ಆಧಾರದಲ್ಲಿ ಬಾಡಿಗೆ ನೀಡಲಿವೆ. ಬಸ್ ಗಳ ಚಾಲನೆಗೆ ಮಾತ್ರ ಬಸ್ ಪೂರೈಸುವ ಸಂಸ್ಥೆಯ ಚಾಲಕರನ್ನು ನಿರ್ವಹಿಸುತ್ತದೆ. ನಿರ್ವಾಹಕರನ್ನು ಸಾರಿಗೆ ನಿಗಮಗಳು ನೇಮಿಸಬೇಕಿದೆ.