ಹೈದರಾಬಾದ್: ಆಂಧ್ರಪ್ರದೇಶದ ಪವಿತ್ರ ಯಾತ್ರಾಸ್ಥಳ ಶ್ರೀಶೈಲದಲ್ಲಿ ಮತ್ತೆ ಕನ್ನಡಿಗರ ಮೇಲೆ ಹಲ್ಲೆ ನಡೆಸಲಾಗಿದೆ. ವಿಜಯಪುರ ಡಿಪೋಗೆ ಸೇರಿದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ನಡೆಸಿರುವ ಕಿಡಿಗೇಡಿಗಳು ಬಸ್ ನ ಗಾಜುಗಳನ್ನು ಪುಡಿಗೈದಿದ್ದಾರೆ.
ಬಸ್ ಚಾಲಕ ಬಸವರಾಜ್ ಹಾಗೂ ನಿರ್ವಾಹಕ ಜೆಡಿ ಮಾದರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ನ ಕಿಟಕಿ ಗಾಜುಗಳನ್ನು ಒಡೆದು ಹಾಕಿರುವ ದುಷ್ಕರ್ಮಿಗಳು ವಾಹನವನ್ನು ಜಖಂಗೊಳಿಸಿದ್ದಾರೆ.
ಶ್ರೀಶೈಲದ ಬಸ್ ನಿಲ್ದಾಣದ ಬಳಿ ತಡರಾತ್ರಿ ಬಸ್ ನಿಲ್ಲಿಸಿ ಊಟ ಮಾಡಿ ಅಲ್ಲಿಯೇ ಕಟ್ಟೆಯ ಮೇಲೆ ಬಸ್ ಚಾಲಕ ಬಸವರಾಜ್ ಮಲಗಿದ್ದಾಗ ಏಕಾಏಕಿ ಸ್ಥಳಕ್ಕಾಗಮಿಸಿದ ದುಷ್ಕರ್ಮಿಗಳ ಗುಂಪು, ಕನ್ನಡಿಗರನ್ನು ಅಶ್ಲೀಲ ಪದಗಳಿಂದ ನಿಂದಿಸಿ, ಚಾಲಕ ಬಸವರಾಜ್ ಮೇಲೆ ಹಲ್ಲೆ ನಡೆಸಿದೆ. ಬಸವರಾಜ್ ಮುಖ ಹಾಗೂ ಕಾಲುಗಳಿಗೆ ಗಾಯಗಳಾಗಿವೆ. ಇದೇ ವೇಳೆ ನಿರ್ಮಾಹಕನ ಮೇಲೂ ಹಲ್ಲೆ ನಡೆಸಿದ್ದಾರಲ್ಲದೇ ಬಸ್ ನ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ.
ಬಸ್ ಚಾಲಕನ ಕೂಗಾಟ ಕೇಳಿ ಉಳಿದ ಬಸ್ ಚಾಲಕರು ಸ್ಥಳಕ್ಕಾಗಮಿಸಿದ್ದು, ಅಷ್ಟರಲ್ಲಿ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಯುಗಾದಿ ಸಂದರ್ಭದಲ್ಲಿಯೂ ಶ್ರೀಶೈಲದಲ್ಲಿ ಕನ್ನಡಿಗರ ಮೇಲೆ ಹಲ್ಲೆಯಾಗಿತ್ತು.
ಪ್ರಸ್ತುತ ಪ್ರಕರಣದ ಬಗ್ಗೆ ಶ್ರೀಶೈಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.