ಬೆಂಗಳೂರು: ಕೆಎಸ್ಆರ್ಟಿಸಿಯಲ್ಲಿ ಚಾಲಕರ ಕೊರತೆ ನಿವಾರಿಸುವ ಉದ್ದೇಶದಿಂದ ಖಾಸಗಿ ಏಜೆನ್ಸಿ ಮೂಲಕ ಚಾಲಕರ ನೇಮಕಾತಿ ಮಾಡಿಕೊಳ್ಳುವ ತಾತ್ಕಾಲಿಕ ಕ್ರಮಕ್ಕೆ ನಿರ್ಧರಿಸಲಾಗಿದೆ.
ಕೆಎಸ್ಆರ್ಟಿಸಿ ನಾಲ್ಕು ನಿಗಮಗಳಲ್ಲಿ 16 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ ಕೊರತೆ ಇದ್ದು, ಚಾಲಕರು, ನಿರ್ವಾಹಕರು, ಮತ್ತು ತಾಂತ್ರಿಕ ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗುತ್ತಿಲ್ಲ. ಉತ್ತಮ ಸೇವೆ ನೀಡುವ ಉದ್ದೇಶದಿಂದ 12,000 ಸಿಬ್ಬಂದಿ ನೇಮಕಾತಿಗೆ ನಾಲ್ಕು ನಿಗಮಗಳ ಮಂಡಳಿ ಸಭೆಯಲ್ಲಿ ಅನುಮತಿ ನೀಡಲಾಗಿದೆ.
ಸಿಬ್ಬಂದಿ ನೇಮಕಾತಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದ್ದು, ಪ್ರಕ್ರಿಯೆ ಪೂರ್ಣಗೊಳಿಸಿ ನೇಮಕಾತಿಗೆ ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಅದುವರೆಗೆ ಚಾಲಕರ ಕೊರತೆ ನಿವಾರಿಸಲು ಖಾಸಗಿ ಏಜೆನ್ಸಿ ಮೂಲಕ ಚಾಲಕರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. 11 ತಿಂಗಳ ಅವಧಿಗೆ 500 ಖಾಸಗಿ ಚಾಲಕರನ್ನು ನೇಮಕಾತಿ ಮಾಡಿಕೊಳ್ಳಲಿದ್ದು, ಆಯ್ಕೆಯಾಗುವ ಚಾಲಕರಿಗೆ ಕನಿಷ್ಠ ಒಂದರಿಂದ ಎರಡು ತಿಂಗಳು ತರಬೇತಿ ನೀಡಿ ಸೇವೆಗೆ ಬಳಸಿಕೊಳ್ಳಲಾಗುವುದು ಎಂದು ಹೇಳಲಾಗಿದೆ.