
ಮೈಸೂರು: ಕೆಎಸ್ಆರ್ಟಿಸಿ ಬಸ್ ಬಾಗಿಲು ಕಳಚಿ ಬಿದ್ದು ಪ್ರಯಾಣಿಕರೊಬ್ಬರು ಹೊರ ಬಿದ್ದು ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ಬಳಿ ನಡೆದಿದೆ.
ಹೊಮ್ಮರಗಹಳ್ಳಿ ಗ್ರಾಮದ ನಾಗೇಶ್(48) ಮೃತಪಟ್ಟವರು. ಹೆಚ್.ಡಿ. ಕೋಟೆ ತಾಲೂಕಿನ ಮೈಸೂರು ಮಾನಂದವಾಡಿ ರಸ್ತೆಯ ಪುರ ಗ್ರಾಮದ ಬಳಿ ಘಟನೆ ನಡೆದಿದೆ.
ಪುರ ಗ್ರಾಮದ ಕೆರೆ ಏರಿ ಮೇಲೆ ಚಾಲಕ ಅತಿ ವೇಗವಾಗಿ ಬಸ್ ಚಾಲನೆ ಬಸ್ ಚಾಲನೆ ಮಾಡಿದ್ದು, ಫುಟ್ ಬೋರ್ಟ್ ಮೇಲೆ ನಿಂತಿದ್ದ ನಾಗೇಶ್ ಆಯತಪ್ಪಿ ಡೋರ್ ಮೇಲೆ ಬಿದ್ದಿದ್ದಾರೆ. ಈ ವೇಳೆ ಡೋರ್ ಕಳಚಿ ಬಿದ್ದಿದೆ. ನಾಗೇಶ್ ಕೂಡ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕೆಎಸ್ಆರ್ಟಿಸಿ ಚಾಲಕನ ನಿರ್ಲಕ್ಷವೇ ನಾಗೇಶ್ ಸಾವಿಗೆ ಕಾರಣ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಕುಟುಂಬದವರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕ ತ್ಯಾಗರಾಜ್ ಮೃತರ ಕುಟುಂಬದವರಿಗೆ 25,000 ರೂ. ಪರಿಹಾರ ನೀಡಿದ್ದು, ಹೆಚ್ಚುವರಿ ಪರಿಹಾರಕ್ಕೆ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.