
ಬೆಂಗಳೂರು: ಸಾರಿಗೆ ನೌಕರರ ವೇತನ ಪರಿಷ್ಕರಣೆ ಬಗ್ಗೆ ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಿಹಿ ಸುದ್ದಿ ನೀಡಿದ್ದಾರೆ.
ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಈ ವಾರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ವೇತನ ಪರಿಷ್ಕರಣೆ ಕುರಿತ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನಿಗಮಗಳು ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು ಹಲವು ಸುತ್ತಿನ ಸಭೆ ನಡೆಸಿ ವೇತನ ಪರಿಷ್ಕರಣೆ ಸ್ವರೂಪದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಆರ್ಥಿಕ ಹೊರೆಯ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಲಿದ್ದು ಬಳಿಕ ವೇತನ ಪರಿಷ್ಕರಣೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಲಾಗಿದೆ. ವೇತನ ಪರಿಷ್ಕರಣೆ ಬೇಡಿಕೆಯನ್ನು ಕೂಡ ಈ ವಾರವೇ ನಿರ್ಧರಿಸಲಾಗುವುದು. ಸಾರಿಗೆ ನೌಕರರು ಏಪ್ರಿಲ್ 7 ರಂದು ಕೈಗೊಂಡ ಮುಷ್ಕರ ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ.
ಮುಷ್ಕರದಿಂದ ವಿದ್ಯಾರ್ಥಿಗಳು ಬಡ-ಮಧ್ಯಮ ವರ್ಗದ ಜನರಿಗೆ ಸಮಸ್ಯೆಯಾಗುತ್ತದೆ. ಕೊರೋನಾದ ಆರ್ಥಿಕ ಸಂಕಷ್ಟದ ನಡುವೆಯೂ ನೌಕರರ ಹಿತರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ವೇತನ ಸೌಲಭ್ಯ ನೀಡಲಾಗಿದೆ ಎಂದು ಹೇಳಿದ್ದಾರೆ.