ಬೆಂಗಳೂರು: ಡೀಸೆಲ್ ದರ ಭಾರೀ ಏರಿಕೆಯಾಗಿದ್ದರೂ ಬಸ್ ಪಾಸ್ ದರ ಏರಿಕೆ ಮಾಡದಿರಲು ತೀರ್ಮಾನಿಸಲಾಗಿದೆ. ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಈ ಬಗ್ಗೆ ಮಾತನಾಡಿ, ಬಸ್ ಪಾಸ್ ದರ ಏರಿಕೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ಹಿಂದುಳಿದವರು, ಬಡ ಮಕ್ಕಳು, ಶೋಷಿತರ ಹಿತದೃಷ್ಟಿಯಿಂದ ಡೀಸೆಲ್ ದರ ಏರಿಕೆಯಾಗಿದ್ದರೂ ಕೂಡ ಬಸ್ ಪಾಸ್ ದರವನ್ನು ಹೆಚ್ಚಳ ಮಾಡುವುದಿಲ್ಲ. 2013 ರ ನಂತರದಲ್ಲಿ ಬಸ್ ಪಾಸ್ ದರ ಹೆಚ್ಚಳ ಮಾಡಿಲ್ಲ. 2709 ಕೋಟಿ ರೂಪಾಯಿ ಬಸ್ ಪಾಸ್ ದರವನ್ನು ಸಾರಿಗೆ ನಿಗಮಗಳು ಭರಿಸಿವೆ ಎಂದು ತಿಳಿಸಿದ್ದಾರೆ.
ಬಿಎಂಟಿಸಿ ಮೊದಲೇ ನಷ್ಟದಲ್ಲಿದ್ದು ಡೀಸೆಲ್ ದರ ಹೆಚ್ಚಳದಿಂದ ಮತ್ತಷ್ಟು ನಷ್ಟದಲ್ಲಿದೆ. ಹೀಗಾಗಿ ಶೇಕಡ 18 ರಿಂದ 20 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ನಿಗಮ ಪ್ರಸ್ತಾವನೆ ಸಲ್ಲಿಸಿದ್ದು ಸಿಎಂ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಉಳಿದ ನಿಗಮಗಳಲ್ಲಿ ಕಳೆದ ವರ್ಷ ಶೇಕಡ 12ರಷ್ಟು ಟಿಕೆಟ್ ದರ ಏರಿಕೆ ಮಾಡಲಾಗಿದೆ. ಹಾಗಾಗಿ ಮತ್ತೊಮ್ಮೆ ಟಿಕೆಟ್ ದರ ಏರಿಕೆ ಮಾಡುವುದಿಲ್ಲ. ಓಲಾ, ಉಬರ್ ದರ ಹೆಚ್ಚಳಕ್ಕೆ ಮನವಿ ಬಂದಿದ್ದು, ಚರ್ಚೆಯ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.