ಬೆಂಗಳೂರು: ಅಪಘಾತ ಹೊರತುಪಡಿಸಿ ಇತರೆ ಕಾರಣದಿಂದ ಸಂಭವಿಸುವ ಸಾವಿನ ಪ್ರಕರಣಗಳಿಗೆ ನೀಡುವ ಪರಿಹಾರದ ಮೊತ್ತವನ್ನು 3 ಲಕ್ಷ ರೂ.ನಿಂದ 10 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿ ಕೆಎಸ್ಆರ್ಟಿಸಿ ಆದೇಶ ಹೊರಡಿಸಿದೆ.
ದೇಶದ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೆಎಸ್ಆರ್ಟಿಸಿ ನೌಕರರಿಗೆ ಕುಟುಂಬ ಕಲ್ಯಾಣ ಯೋಜನೆ ಪರಿಹಾರ ಮೊತ್ತವನ್ನು 3 ಲಕ್ಷ ರೂ.ನಿಂದ 10 ಲಕ್ಷ ರೂ.ಗೆ ಹೆಚ್ಚಳ ಮಾಡಿದೆ. ಕೆಎಸ್ಆರ್ಟಿಸಿಯಲ್ಲಿ ಈಗಾಗಲೇ ಸೇವೆಯಲ್ಲಿರುವ ಸಿಬ್ಬಂದಿ ಖಾಸಗಿ ಅಥವಾ ಕರ್ತವ್ಯದ ಸಂದರ್ಭದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ಅಪಘಾತ ವಿಮಾ ಪರಿಹಾರ ಯೋಜನೆಯಡಿ ಒಂದು ಕೋಟಿ ರೂಪಾಯಿ ಮೊತ್ತದ ಆರ್ಥಿಕ ಪರಿಹಾರ ಒದಗಿಸಲಾಗುತ್ತಿದೆ. ಇದುವರೆಗೆ 7 ಪ್ರಕರಣಗಳಲ್ಲಿ ಅಪಘಾತದಿಂದ ಮೃತಪಟ್ಟ ನೌಕರರ ಅವಲಂಬಿತರಿಗೆ ತಲಾ ಒಂದು ಕೋಟಿ ರೂ. ನೀಡಲಾಗಿದೆ.
ಯೋಜನೆ ವಿಸ್ತರಣೆ ಮಾಡಿ ಅಪಘಾತ ಹೊರತುಪಡಿಸಿ ಇತರೆ ಕಾರಣದಿಂದ ಮೃತಪಟ್ಟ ನೌಕರರ ಕುಟುಂಬದವರಿಗೆ ಪರಿಹಾರ ಮೊತ್ತ ಹೆಚ್ಚಳ ಮಾಡಲಾಗಿದೆ. ಕ್ಯಾನ್ಸರ್, ಹೃದಯಾಘಾತ, ಕಿಡ್ನಿ ವೈಫಲ್ಯ ಮೊದಲಾದ ಕಾಯಿಲೆಗಳಿಂದ ಪ್ರತಿ ವರ್ಷ ಸುಮಾರು 100 ನೌಕರರು ಮೃತಪಡುತ್ತಿದ್ದಾರೆ. ಈ ರೀತಿ ಸೇವಾ ಅವಧಿಯಲ್ಲಿ ಮರಣ ಹೊಂದುತ್ತಿರುವ ನೌಕರರ ಕುಟುಂಬದವರಿಗೆ ನೆರವಾಗಲು ನೀಡುತ್ತಿದ್ದ ಮೂರು ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು 10 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
ಈ ಯೋಜನೆಗೆ ನೌಕರರ ಮಾಸಿಕ ವಂತಿಕೆಯನ್ನು 100 ರೂ.ಗಳಿಂದ 200 ರೂ.ಗೆ, ನಿಗಮದ ವತಿಯಿಂದ ಪ್ರತಿ ನೌಕರರ ಪರವಾಗಿ ನೀಡುತ್ತಿರುವ 50 ರೂ. ವಂತಿಕೆಯನ್ನು 100 ರೂ.ಗೆ ಹೆಚ್ಚಳ ಮಾಡಿ ಪರಿಷ್ಕರಿಸಲಾಗಿದೆ. ನವೆಂಬರ್ 1ರಿಂದ ಪರಿಷ್ಕೃತ ಆದೇಶ ಜಾರಿಗೆ ಬರಲಿದೆ.