ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಬೆಳವಣಿಗೆ ಹೆಚ್ಚಾಗಿರುವ ಮೂರ್ನಾಲ್ಕು ವರ್ಷದ ಮಕ್ಕಳಿಗೂ ಅರ್ಧ ಟಿಕೆಟ್ ಪಡೆಯುತ್ತಿದ್ದು, ಬಡ ಪ್ರಯಾಣಿಕರಿಗೆ ಆರ್ಥಿಕ ಹೊರೆಯಾಗಿತ್ತು. ಈ ಬಗ್ಗೆ ಕ್ರಮ ಕೈಗೊಂಡ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಕ್ಕಳ ಎತ್ತರ ಬೆಳವಣಿಗೆ ಪರಿಗಣಿಸದೇ ಆರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಅರ್ಧ ಟಿಕೆಟ್ ಪಡೆಯುವಂತೆ ಸೂಚನೆ ನೀಡಿದ್ದಾರೆ.
ಮಕ್ಕಳ ಬೆಳವಣಿಗೆ ಹೆಚ್ಚಾಗಿದ್ದ ಸಂದರ್ಭದಲ್ಲಿ ನಿರ್ವಾಹಕರು ಎತ್ತರ ಪರಿಗಣಿಸಿ ಅರ್ಧ ಟಿಕೆಟ್ ಪಡೆದುಕೊಳ್ಳುತ್ತಿದ್ದರು. ಆರು ವರ್ಷದೊಳಗಿನ ಮಕ್ಕಳಿಗೆ ಅರ್ಧ ಟಿಕೆಟ್ ಪಡೆಯಲಾಗುತ್ತಿತ್ತು. ಇದರಿಂದ ಬಡ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಮತ್ತು ಕೆಲವು ಪೋಷಕರಿಗೆ ಮುಜುಗರವಾಗುತ್ತದೆ ಎನ್ನುವ ಕಾರಣಕ್ಕೆ ಕೆಎಸ್ಆರ್ಟಿಸಿ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. 2021 ರಲ್ಲಿಯೇ ಈ ಬಗ್ಗೆ ಸ್ಪಷ್ಟ ಸುತ್ತೋಲೆ ಹೊರಡಿಸಿದ್ದಾರೆ.
ಆರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಅರ್ಧ ಟಿಕೆಟ್ ಪಡೆದುಕೊಳ್ಳಬೇಕು. 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಪೂರ್ಣ ಟಿಕೆಟ್ ದರ ಪಡೆದುಕೊಳ್ಳಬೇಕು ಎಂದು ಹೇಳಲಾಗಿದೆ.