ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಹಿಳಾ ಸಿಬ್ಬಂದಿಗೆ 180 ದಿನ ಶಿಶುಪಾಲನಾ ರಜೆ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ.
ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಚಾಲ್ತಿಯಲ್ಲಿರುವ ಪ್ರಸೂತಿ ರಜೆಯೊಂದಿಗೆ ಒಟ್ಟು ಸೇವಾವಧಿಯಲ್ಲಿ ಆರು ತಿಂಗಳವರೆಗೆ ಅಂದರೆ 180 ದಿನಗಳ ಶಿಶುಪಾಲನ ರಜೆಯನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ನಿಗಮದ ಮಹಿಳಾ ನೌಕರರು ಹೊಂದಿರುವ ಮಕ್ಕಳ ಸಂಖ್ಯೆ ಪರಿಗಣಿಸದೆ ಅತ್ಯಂತ ಕಿರಿಯ ಮಗುವು 18 ವರ್ಷ ತಲುಪುವವರೆಗೆ ಅವಧಿಗೆ ಮಾತ್ರ ರಜೆ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.
ರಜೆ ಅವಧಿಯಲ್ಲಿ ಮಹಿಳಾ ಸಿಬ್ಬಂದಿ ರಜೆ ಮೇಲೆ ಹೋಗುವ ನಿಕಟಪೂರ್ವದಲ್ಲಿ ಪಡೆಯಲು ಅರ್ಹವಿರುವ ಸಂಪೂರ್ಣ ವೇತನಕ್ಕೆ ಸಮನಾದ ರಜೆ ಸಂಬಳಕ್ಕೆ ಅರ್ಹರಾಗಿರುತ್ತಾರೆ.
ಪ್ರತಿ ಬಾರಿ ಈ ರಜೆ ಮಂಜೂರಾತಿಯು ಕನಿಷ್ಠ 15 ದಿನಗಳಿಗಿಂತ ಕಡಿಮೆ ಇರಬಾರದು. ಮಹಿಳಾ ನೌಕರರು ಈ ರಜೆಯನ್ನು ಸಾಂದರ್ಭಿಕ ರಜೆಯ ಹೊರತಾಗಿ ನಿಯಮಾನುಸಾರ ಪಡೆಯಲು ಅರ್ಹವಿರುವ ಅಸಾಧಾರಣ ರಜೆ ಒಳಗೊಂಡಂತೆ ಇತರೆ ರಜೆಯೊಂದಿಗೆ ಸಂಯೋಜಿಸಿ ಪಡೆಯಬಹುದಾಗಿದೆ.
ಈ ರಜೆಯನ್ನು ಯಾವುದೇ ರಜೆ ಲೆಕ್ಕದಿಂದ ಕಳೆಯತಕ್ಕದ್ದಲ್ಲ. ಉಪಯೋಗಿಸಿಕೊಳ್ಳದ ಈ ಸೌಲಭ್ಯದ ಸಂಬಂಧದಲ್ಲಿನ ರಜೆಯನ್ನು ಗಳಿಕೆ ರಜೆ ಲೆಕ್ಕಕ್ಕೆ ಸೇರಿಸಲು, ನಗದೀಕರಿಸಿಸಲು ಅವಕಾಶ ಇರುವುದಿಲ್ಲ ಎಂದು ಹೇಳಲಾಗಿದೆ.
ಶಿಶುಪಾಲನಾ ರಜೆ ಮಂಜೂರಾತಿಗೆ ಯಾವುದೇ ಪೂರಕ ದಾಖಲೆಗಳನ್ನು ಪಡೆಯುವ ಅವಶ್ಯಕತೆಯಿಲ್ಲ. ಸೇವಾ ಪುಸ್ತಕದಲ್ಲಿ ನಮೂದಿಸಿದ ಮಕ್ಕಳ ವಿವರಗಳ ಆಧಾರದ ಮೇಲೆ ಮಂಜೂರು ಮಾಡತಕ್ಕದ್ದು. ಬುದ್ಧಿಮಾಂದ್ಯ, ಅಂಗವಿಕಲ ಮಕ್ಕಳನ್ನು ಹೊಂದಿರುವ ಸರ್ಕಾರಿ ಮಹಿಳಾ ನೌಕರರಿಗೆ ಮಂಜೂರು ಮಾಡಿರುವ 730 ದಿನಗಳ ಶಿಶುಪಾಲನಾ ರಜೆ ಸೌಲಭ್ಯಕ್ಕೆ ಅರ್ಹರಾದ ಯಾವುದೇ ಮಹಿಳಾ ನೌಕರರು ಯೋಜನೆಯನ್ನು ಆಯ್ಕೆ ಮಾಡಿಕೊಳ್ಳ ತಕ್ಕದ್ದು, ಅದರೊಂದಿಗೆ ಯೋಜನೆಯ ಸೌಲಭ್ಯಕ್ಕೂ ಅರ್ಹರಾಗುವುದಿಲ್ಲ ಎನ್ನಲಾಗಿದೆ.