ಕೊಡಗು: ಕಾರು ಅಪಘಾತದ ವೇಳೆ ಅಪಘಾತ ವಿಮೆ ಪರಿಹಾರ ನೀಡಲು ಕೆ.ಎಸ್.ಆರ್.ಟಿ.ಸಿ ಸಂಸ್ಥೆ ವಿಫಲವಾದ ಹಿನ್ನೆಲೆಯಲ್ಲಿ ಸಾರಿಗೆ ಬಸ್ ನ್ನೇ ನ್ಯಾಯಾಲಯ ಜಪ್ತಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಈ ಘಟನೆ ನಡೆದಿದೆ. 2010ರಲ್ಲಿ ವಿರಾಜಪೇಟೆ ನಿವಾಸಿ ಮುನಾವರ್ ತಮ್ಮ ಸ್ಯಾಂಟ್ರೋ ಕಾರಿನಲ್ಲಿ ಕುಟುಂಬ ಸಮೇತ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಹುಣಸೂರು ಬಳಿ ವೇಗವಾಗಿ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಕಾರಿಗೆ ಗುದ್ದಿತ್ತು. ಅಪಘಾತದಲ್ಲಿ ಮುನಾವರ್ ಸಾವನ್ನಪ್ಪಿದ್ದರು.
ಅಪಘಾತಕ್ಕೆ ಸಂಬಂಧಿಸಿದಂತೆ ಮುನಾವರ್ ಕುಟುಂಬ ಕೋರ್ಟ್ ಮೆಟ್ಟಿಲೇರಿತ್ತು. ಮುನಾವರ್ ಕುಟುಂಬಕ್ಕೆ ಕೆ.ಎಸ್.ಆರ್.ಟಿ.ಸಿ ಪರಿಹಾರ ನೀಡಿತ್ತು. ಆದರೆ ಜಖಂಗೊಂಡಿದ್ದ ಕಾರಿಗೂ ವಿಮಾ ಪರಿಹಾರ ನೀಡುವಂತೆ ಮುನಾವರ್ ಪತ್ನಿ ವಿರಾಜಪೇಟೆ ಹೆಚ್ಚುವರಿ ಸೆಷನ್ಸ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿದಾರರಿಗೆ ವಿಮಾ ಪರಿಹಾರ ಹಣ 1,48,130 ರೂಪಾಯಿ ಪಾವತಿಸುವಂತೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಕೆ.ಎಸ್.ಆರ್.ಟಿ.ಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ ಹೈಕೋರ್ಟ್ ಕೂಡ ಕೋರ್ಟ್ ಆದೇಶ ಪಾಲಿಸಲು ಸೂಚಿಸಿತ್ತು.
2021ರವರೆಗೂ ಕಾರಿನ ವಿಮಾ ಪರಿಹಾರ ಹಣ ಪಾವತಿಸುವಂತೆ ಕೋರ್ಟ್ ಹಲವು ಬಾರಿ ಸೂಚಿಸಿತ್ತು. ಆದಾಗ್ಯೂ ನ್ಯಾಯಾಲಯದ ಆದೇಶವನ್ನು ಸಾರಿಗೆ ಸಂಸ್ಥೆ ನಿರ್ಲಕ್ಷ್ಯ ಮಾಡಿದೆ. ಈ ಹಿನ್ನೆಲೆಯಲ್ಲಿ ವಿರಾಜಪೇಟೆ ಹೆಚ್ಚುವರಿ ನ್ಯಾಯಾಲಯ ಇದೀಗ ಕೆ.ಎಸ್.ಆರ್.ಟಿ.ಸಿ ಬಸ್ ನ್ನೇ ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೊಳ್ಳೆಗಾಲ ಡಿಪೋಗೆ ಸೇರಿದ ಕೆ.ಎಸ್.ಆರ್.ಟಿ.ಸಿ ಬಸ್ ವಶಕ್ಕೆ ಪಡೆದು ಕೋರ್ಟ್ ಗೆ ಒಪ್ಪಿಸಿದ್ದಾರೆ.