ಬೆಂಗಳೂರು: ವೇತನ ಹೆಚ್ಚಳ, ವೇತನ ಹಿಂಬಾಕಿ ಪಾವತಿ ಸೇರಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಡಿಸೆಂಬರ್ 9 ರಂದು ಬೆಳಗಾವಿ ಚಲೋ ನಡೆಸಲಿದ್ದಾರೆ. ಹೀಗಾಗಿ ಬಸ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಬಸ್ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಡಿಸೆಂಬರ್ 9ರಂದು ರಜೆ ತೆಗೆದುಕೊಳ್ಳದೇ ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಗಮಗಳು ಸೂಚನೆ ನೀಡಿವೆ.
ಕೆಎಸ್ಆರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಸಾರಿಗೆ ನೌಕರರು ವಿಧಾನ ಮಂಡಲ ಅಧಿವೇಶನ ಆರಂಭವಾಗುವ ಡಿಸೆಂಬರ್ 9ರಂದು ಬೆಳಗಾವಿಯಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ. ಡಿಸೆಂಬರ್ 8ರ ಭಾನುವಾರದಿಂದಲೇ ನೌಕರರ ಬೆಳಗಾವಿಗೆ ತೆರಳುವ ಸಾಧ್ಯತೆ ಇದೆ.
ಹೀಗಾಗಿ ಭಾನುವಾರ ಮತ್ತು ಸೋಮವಾರ ರಾಜ್ಯದಲ್ಲಿ ಬಸ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಅನಿವಾರ್ಯ ಕಾರಣ ಹೊರತುಪಡಿಸಿ ಭಾನುವಾರ ಮತ್ತು ಸೋಮವಾರ ರಜೆ ತೆಗೆದುಕೊಳ್ಳದೆ ಕಾರ್ಯನಿರ್ವಹಿಸಲು ನೌಕರರಿಗೆ ಸೂಚಿಸಲಾಗಿದೆ. ಅನುಮತಿ ಪಡೆಯದೆ ರಜೆ ಪಡೆದು ಕರ್ತವ್ಯಕ್ಕೆ ಗೈರುಹಾಜರಾಗುವ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸಾರಿಗೆ ನಿಗಮಗಳು ಎಚ್ಚರಿಕೆ ನೀಡಿವೆ.