ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಸಮೀಪ KSRTC ಬಸ್ ಪಲ್ಟಿಯಾಗಿ 13 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬಿಸಿ ರೋಡ್ -ಪುಂಜಾಲಕಟ್ಟೆ ಹೆದ್ದಾರಿ ವಗ್ಗಾ ಸಮೀಪ ಧರ್ಮಸ್ಥಳದಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದಿದೆ. ಬಸ್ ನಲ್ಲಿ ಸುಮಾರು 50 ಪ್ರಯಾಣಿಕರಿದ್ದರು. ಇವರಲ್ಲಿ 13 ಪ್ರಯಾಣಿಕರು ಗಾಯಗೊಂಡಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಸ್ತೂರಿ, ವಿಶ್ವನಾಥ್, ಶಾಕೀರ್, ತನುಶ್ರೀ, ಶೋಭಾ ಅವರ ತಲೆ, ಬೆನ್ನು ಮೂಳೆಗೆ ಪೆಟ್ಟಾಗಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಣ್ಣ ಪುಟ್ಟ ಗಾಯಗೊಂಡಿರುವ ಪವನ್, ನಿಖಿತಾ, ಸುಧಾಮ, ಹೇಮಾವತಿ, ರಾಜಶ್ರೀ ಸೇರಿದಂತೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಪಲ್ಟಿ ಆಗಿದ್ದರಿಂದ ಪ್ರಯಾಣಿಕರಿಗೆ ಹೊರಬರಲು ಸಾಧ್ಯವಾಗಿಲ್ಲ. ಸ್ಥಳೀಯರು ಧಾವಿಸಿ ಬಂದು ಬಸ್ ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಹೊರಗೆ ತಂದು ರಕ್ಷಿಸಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಬಸ್ ಚಾಲಕ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ರಸ್ತೆ ಬದಿಯ ಅಂಚಿಗೆ ಜಾರಿ ಪಲ್ಟಿ ಹೊಡೆದಿದೆ. ಬಂಟ್ವಾಳ ಸಂಚಾರ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದಾಗಿ ಕೆಲಕಾಲ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.