ಬೆಂಗಳೂರು: ಕರ್ತವ್ಯ ನಿರ್ವಹಿಸುವ ವೇಳೆ ರೀಲ್ಸ್ ಮಾಡುವ ಬಸ್ ಚಾಲಕರು, ನಿರ್ವಾಹಕರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಸಿ ಮುಟ್ಟಿಸಿದ್ದಾರೆ.
ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ ಬಸ್ ಚಾಲಕರು, ನಿರ್ವಾಹಕರ ರೀಲ್ಸ್ ಹುಚ್ಚಾಟಕ್ಕೆ ಪ್ರಯಾಣಿಕರು, ಸಾರ್ವಜನಿಕರು ಅಷ್ಟೇ ಯಾಕೆ ಜಾನುವಾರಗಳ ಜೀವಕ್ಕು ಕುತ್ತು ಉಂಟಾಗುವ ಸಾಧ್ಯತೆ ಹೆಚ್ಚು. ಈ ನಿಟ್ಟಿನಲ್ಲಿ ಅಂತಹ ಹುಚ್ಚಾಟ ಮೆರೆಯುವ ಚಾಲಕರು, ನಿರ್ವಾಹಕರನ್ನು ಸಸ್ಪೆಂಡ್ ಮಾಡುವಂತೆ ಸಚಿವರು ಸೂಚಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಕರ್ತವ್ಯದ ವೇಳೆ ರೀಲ್ಸ್ ಮಾಡಿ ಹುಚ್ಚಾಟ ನಡೆಸುವ ಚಾಲಕರು, ನಿರ್ವಾಹಕರನ್ನು ಮುಲಾಜಿಲ್ಲದೇ ಅಮಾನತುಗೊಳಿಸಲಾಗುವುದು ಎಂದರು.
ಕೆಲ ದಿನಗಳ ಹಿಂದೆ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನೊಬ್ಬ ಬಸ್ ಒಳಗೆ ಕೊಡೆ ಹಿಡಿದುಕೊಂಡು ಬಸ್ ಚಲಾಯಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಧಾರವಾಡ ಘಟಕದ ಬೆಟಗೇರಿ-ಧಾರವಾಡ ಮಾರ್ಗದಲ್ಲಿ ಸಂಚರಿಸುವ ಬಸ್ ನಲ್ಲಿ ಚಾಲಕ ಹನುಮಂತಪ್ಪ ಕಿಲೇದಾರ ಬಸ್ ನಲ್ಲಿ ಛತ್ರಿ ಹಿಡಿದುಕೊಂಡು ಬಸ್ ಚಲಾಯಿಸಿದ್ದರೆ, ನಿರ್ವಾಹಕಿ ಅನೀತಾ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಡಲಾಗಿತ್ತು.
ಇನ್ನೊಂದು ಘಟನೆಯಲ್ಲಿ ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಹೊರಟಿದ್ದ ಬಸ್ ನಲ್ಲಿ ಚಾಲಕನ ರೀಲ್ಸ್ ಹುಚ್ಚಾಟಕ್ಕೆ ಎರಡು ಎತ್ತುಗಳು ಬಲಿಯಾಗಿವೆ. ಬಸ್ ಚಾಲಕ ಬಸ್ ಓಡಿಸುತ್ತಾ ರೀಲ್ಸ್ ಗೆ ಪೋಸ್ ನೀಡಲು ಹೋಗಿದ್ದಾನೆ. ರೀಲ್ಸ್ ಗುಂಗಿನಲ್ಲಿ ಬಸ್ ಚಲಾಯಿಸುತ್ತಿರುವುದನ್ನು ಮರೆತಿದ್ದು, ಚಕ್ಕಡಿ ಗಾಡಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಎರಡು ಎತ್ತುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ರೈತ ಮಂಜುನಾಥ್ ಎಂಬುವವರ ಮೆದುಳು ನಿಷ್ಕ್ರಿಯವಾಗಿವೆ. ಬಸ್ ಚಾಲಕರು, ನಿರ್ವಾಹಕರ ರೀಲ್ಸ್ ನಿಂದಾಗಿ ಇಂತಹ ದುರಂತಗಳು ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ಅಂತಹ ಚಾಲಕರು, ನಿರ್ವಾಹಕರ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗುವುದು ಎಂದರು.