ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಊರಿಗೆ ಹೊರಟವರಿಗೆ ಖುಷಿ ಸುದ್ದಿ ಇಲ್ಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೆಚ್ಚುವರಿಯಾಗಿ 1000 ಬಸ್ ಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದೆ.
ನವೆಂಬರ್ 13, 14 ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ವಿಶೇಷ ಬಸ್ ಸಂಚರಿಸಲಿವೆ. ನವೆಂಬರ್ 16 ರಂದು ಬೆಂಗಳೂರಿಗೆ ವಾಪಸಾಗಲಿವೆ. ಹೆಚ್ಚುವರಿ ಬಸ್ ಗಳಿಗೆ ಮುಂಗಡವಾಗಿ ಸೀಟು ಕಾಯ್ದಿರಿಸಲು ಅವಕಾಶವಿದೆ. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಿಗೆ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುವುದು. ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್ ಅನ್ನು ಒಟ್ಟಿಗೆ ಕಾಯ್ದಿರಿಸುವ ಪ್ರಯಾಣಿಕರಿಗೆ ಶೇಕಡ 10ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಂದಲೂ ವಿಶೇಷ ಬಸ್ ಗಳು ಕಾರ್ಯಾಚರಣೆ ನಡೆಸಲಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಧಾರವಾಡ, ಬೆಳಗಾವಿ, ವಿಜಯಪುರ, ದಾವಣಗೆರೆ, ಹುಬ್ಬಳ್ಳಿ, ಕಾರವಾರ, ತಿರುಪತಿ, ಮೊದಲಾದ ಸ್ಥಳಗಳಲ್ಲಿ ಮೈಸೂರು ನಿಲ್ದಾಣದಿಂದ ವಿವಿಧ ಕಡೆಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ನೆರೆಯ ರಾಜ್ಯಗಳಿಗೂ ವಿಶೇಷ ಬಸ್ ಸಂಚರಿಸಲಿವೆ. www.ksrtc.in ನಲ್ಲಿ ಇ ಟಿಕೆಟ್ ಬುಕ್ ಮಾಡಬಹುದಾಗಿದ್ದು, ಬುಕ್ಕಿಂಗ್ ಕೌಂಟರ್ ಗಳಲ್ಲೂ ಟಿಕೆಟ್ ಬುಕ್ ಮಾಡಬಹುದು ಎಂದು ಹೇಳಲಾಗಿದೆ.