ಬೆಂಗಳೂರು: ನಷ್ಟದಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳನ್ನು ಲಾಭದತ್ತ ಮುನ್ನಡೆಸುವ ಉದ್ದೇಶದಿಂದ ಎಲ್ಲಾ ನಾಲ್ಕು ಸಾರಿಗೆ ನಿಗಮಗಳನ್ನು ವಿಲೀನಗೊಳಿಸಲು ಸರ್ಕಾರ ಮುಂದಾಗಿದೆ.
9 ಲಕ್ಷ ಕಿಲೋ ಮೀಟರ್ ಗಿಂತ ಹೆಚ್ಚು ಸಂಚಾರ ಮಾಡಿದ ಬಸ್ ಗಳನ್ನು ಗುಜರಿಗೆ ಹಾಕುವ ಬದಲು ಮರು ವಿನ್ಯಾಸಗೊಳಿಸಿ ಕಾರ್ಯಾಚರಣೆಗೆ ಬಿಡಲು ತೀರ್ಮಾನ ಕೈಗೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಾರಿಗೆ ಸಚಿವ ಬಿ. ಶ್ರೀರಾಮುಲು, 4 ಸಾರಿಗೆ ನಿಗಮಗಳ ವಿಲೀನದಿಂದ ಆಡಳಿತಾತ್ಮಕ, ಇಂಧನ, ಸಿಬ್ಬಂದಿ ವೆಚ್ಚ ಒಳಗೊಂಡಂತೆ ಸುಮಾರು ಶೇಕಡ 50ರಷ್ಟು ನಷ್ಟ ತಗ್ಗಲಿದೆ. ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸಾರಿಗೆ ಸಂಸ್ಥೆಗಳಲ್ಲಿ ಹೊಸ ನೇಮಕಾತಿಗೆ ತಡೆ ನೀಡಲಾಗಿದ್ದು, ಇತ್ತೀಚೆಗೆ ಸೇವೆಯಿಂದ ನಿವೃತ್ತರಾದ ಎರಡು ಸಾವಿರ ಮಂದಿ ಚಾಲಕರನ್ನು ದೈಹಿಕ ಸದೃಢತೆ ಪ್ರಮಾಣ ಪತ್ರ ಪಡೆದುಕೊಂಡು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಚಾಲಕ ಕಮ್ ನಿರ್ವಾಹಕ ಹುದ್ದೆಗಳಿಗೆ ಮಾತ್ರ ಇನ್ನು ಮುಂದೆ ನೇಮಕ ಮಾಡಲಿದ್ದು, ಆಡಳಿತಾತ್ಮಕ ಸಿಬ್ಬಂದಿ ಕಡಿತಕ್ಕೂ ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.