ಬೆಂಗಳೂರು: ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ಬಳಿಕ ಇನ್ನಷ್ಟು ಆತಂಕದ ವಾತಾವರಣ ನಿರ್ಮಾಣವಾಗಿದೆ. ಸಿಎಂ, ಡಿಸಿಎಂ, ಗೃಹಸಚಿವರಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಅಂಬಾರಿ ಬಸ್ ಬ್ಲಾಸ್ಟ್ ಮಾಡುವುದಾಗಿಯೂ ಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬಾಂಬ್ ಬೆದರಿಕೆ ಬಂದಿರುವುದು ನಿಜ. ಸಿಎಂ ಸಿದ್ದರಾಮಯ್ಯ ಹಾಗೂ ನನಗೆ ಮೊನ್ನೆಯೇ ಬೆದರಿಕೆ ಸಂದೇಶ ಬಂದಿದೆ. ಈ ಬಗ್ಗೆ ಕಮೀಷ್ನರ್ ಅವರಿಗೆ ತನಿಖೆಗೆ ಸೂಚಿಸಿದ್ದೇವೆ ಎಂದರು.
ಅಲರ್ಟ್-1 ರಲ್ಲಿ ಶಹೀರ್ ಖಾನ್ ಎಂಬಾತನಿಂದ 2.5 ಮಿಲಿಯನ್ ಡಾಲರ್ ಕಳುಹಿಸಬೇಕು. ಇಲ್ಲದಿದ್ದಲ್ಲಿ ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಅಲರ್ಟ್-2ರಲ್ಲಿ ಅಂಬಾರಿ ಉತ್ಸವ್ ಬಸ್ ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಲಾಗಿದೆ. ಇ-ಮೇಲ್ ಪೊಲೀಸರಿಗೆ ರವಾನಿಸಿದ್ದು, ತನಿಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕೆ ಎಸ್ ಆರ‍್ ಟಿಸಿ ಅಂಬಾರಿ ಉತ್ಸವ್ ಬಸ್ ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿರುವುದರಿಂದ ಪ್ರಯಾಣಿಕರಿಗೂ ಆತಂಕ ಶುರುವಾಗಿದೆ. ಬಸ್ ನಿಲ್ದಾಣ ಹಾಗೂ ಅಂಬಾರಿ ಬಸ್ ನಲ್ಲಿ ಕಟ್ಟೆಚ್ಚರವಹಿಸಲಾಗಿದೆ.