ಮೈಸೂರು ವಿಶ್ವವಿದ್ಯಾಲಯದಲ್ಲಿ ಒಂದು ವರ್ಷದ ಡಿಪ್ಲೋಮೋ ಕೋರ್ಸ್ ಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಯೊಬ್ಬರು ತಮ್ಮ ಊರಿನಿಂದ ಓಡಾಡಲು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಪಾಸ್ ನೀಡಲು ನಿರಾಕರಿಸುತ್ತಿರುವ ಕಾರಣ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.
ಮೈಸೂರಿನಲ್ಲಿ ಈ ಘಟನೆ ನಡೆದಿದ್ದು, ಹುಣಸೂರು ತಾಲೂಕಿನ ಕಲ್ಕುಣಿಗಿ ನಿವಾಸಿ ಕುಮಾರ್ ಎಂಬವರು ಮೈಸೂರು ವಿವಿಯ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನದ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿದ್ದಾರೆ. ಇವರು 45 ಕಿ.ಮೀ ದೂರದ ತಮ್ಮ ಊರಿನಿಂದ ಮೈಸೂರಿಗೆ ಬರಲು ಬಸ್ ಪಾಸ್ ಗಾಗಿ ಕೆಎಸ್ಆರ್ಟಿಸಿ ಗೆ ಅರ್ಜಿ ಸಲ್ಲಿಸಿದ್ದರು.
ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಯಮದಂತೆ ಮೂರು ವರ್ಷದ ಡಿಪ್ಲೋಮೋ ಸೇರಿದಂತೆ ಇನ್ನಿತರ ದೀರ್ಘಾವಧಿ ಕೋರ್ಸ್ ಗಳಿಗೆ ಬಸ್ ಪಾಸ್ ನೀಡಲು ಅವಕಾಶವಿದ್ದು ಅಲ್ಪಾವಧಿ ಕೋರ್ಸ್ಗೆ ಪಾಸ್ ನೀಡುವಂತಿಲ್ಲ. ಆದರೆ ಕುಮಾರ್ ಅವರದ್ದು ಒಂದು ವರ್ಷದ ಡಿಪ್ಲೋಮೋ ಕೋರ್ಸ್. ಹೀಗಾಗಿ ಪಾಸ್ ನಿರಾಕರಿಸಲಾಗಿದೆ ಎಂದು ಹೇಳಲಾಗಿದೆ.
ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಈ ನಿಯಮದಿಂದಾಗಿ ಕುಮಾರ್ ಅವರಿಗೆ ಶಿಕ್ಷಣ ಪಡೆಯಲು ಕಷ್ಟಕರವಾಗಿದೆ. ಹೀಗಾಗಿ ಅವರು ಮಂಗಳವಾರದಂದು ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ. ಕುಮಾರ್ ಅವರು ಶೈಕ್ಷಣಿಕ ಉದ್ದೇಶಕ್ಕಾಗಿ ಪಾಸ್ ಕೇಳುತ್ತಿರುವ ಕಾರಣ ನಿಯಮವನ್ನು ಸಡಿಲಿಸಿ ಪಾಸ್ ನೀಡುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿಬಂದಿದೆ.