ಬೆಂಗಳೂರು: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(KSOU) ನಡೆಸುತ್ತಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ತಡೆ ಹಿಡಿಯುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಕೆ.ಎಸ್.ಒ.ಯು. ವತಿಯಿಂದ 7 ಪ್ರಾಧ್ಯಾಪಕರು, 25 ಸಹಪ್ರಾಧ್ಯಾಪಕರು, 32 ವಿವಿಧ ಬೋಧಕೇತರ ಸಿಬ್ಬಂದಿ ನೇರ ನೇಮಕಾತಿಗೆ ಆಗಸ್ಟ್ ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ನೇಮಕಾತಿ ಪ್ರಕ್ರಿಯೆ ಹಂತದಲ್ಲಿದ್ದು, ಈ ನೇಮಕಾತಿ ಪ್ರಕ್ರಿಯೆಯಲ್ಲಿ ಮೀಸಲು ನಿಯಮ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಕೆಲವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.
ಈ ಕಾರಣದಿಂದ ನೇಮಕಾತಿಗೆ ರಾಜ್ಯ ಸರ್ಕಾರ ತಡೆ ನೀಡಿದೆ. ಕೆಲವು ನೇಮಕಾತಿಯ ಹುದ್ದೆಗಳನ್ನು ಸೃಜಿಸಿರುವ ಬಗ್ಗೆ ಮಾಹಿತಿ ಕೇಳಿದೆ. ಪ್ರಸ್ತಾಪಿತ ಹುದ್ದೆಗಳು ಯಾವ ವಿಭಾಗ ಯಾವ ವಿಷಯಕ್ಕೆ ಸೇರಿದ ಹುದ್ದೆಗಳು? ವಿವಿಯಲ್ಲಿ ಪ್ರಸ್ತುತ ನಡೆಸುತ್ತಿರುವ ಕೋರ್ಸ್ ಗಳ ಮಾಹಿತಿ ನೀಡಬೇಕು. ಹುದ್ದೆಗಳಿಗೆ ಅಗತ್ಯವಾದ ಅನುದಾನವನ್ನು ವಿವಿಯ ಆಂತರಿಕ ಸಂಪನ್ಮೂಲದಿಂದ ಭರಿಸುವ ಸಾಧ್ಯತೆಯ ಬಗ್ಗೆ, ಬ್ಯಾಕ್ ಲಾಕ್ ಹುದ್ದೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಗಳು ವಿವಿಗೆ ಸೂಚನೆ ನೀಡಿದ್ದಾರೆ.