ಶಿವಮೊಗ್ಗ: ರಾಷ್ಟ್ರಧ್ವಜ ಕುರಿತ ನನ್ನ ನಿಲುವಿನಲ್ಲಿ ಬದಲಾವಣೆಯಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ವಿರೋಧಪಕ್ಷದವರು ಪ್ರತಿಭಟನೆ ಮಾಡುವುದು ಅವರ ಕೆಲಸ. ಈ ವಿವಾದದ ಕುರಿತಾಗಿ ಜನರ ತೀರ್ಮಾನ ಮಾಡುತ್ತಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನನ್ನ ಸ್ನೇಹಿತರೆ ಆಗಿದ್ದಾರೆ. ಮತ್ತೆ ಹೇಳಿಕೆ ನೀಡಿ ವಿವಾದ ಬೆಳೆಸುವುದು ನನಗೆ ಇಷ್ಟವಿಲ್ಲ. ನಾನೊಂದು ಹೇಳಿಕೆ ನೀಡಿದರೆ ಅವರೊಂದು ಹೇಳುತ್ತಾರೆ. ಹೀಗಾಗಿ ಈ ವಿವಾದದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕಿದೆ. ಸದನದಲ್ಲಿ ಚರ್ಚೆ ನಡೆಸಲು ವಿಪಕ್ಷಗಳು ಅವಕಾಶ ನೀಡಬೇಕು ಎಂದು ಈಶ್ವರಪ್ಪ ಮನವಿ ಮಾಡಿದ್ದಾರೆ.
ತಮ್ಮ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಧರಣಿ ನಡೆಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಂತಹುದಕ್ಕೆಲ್ಲ ಬಗ್ಗಲ್ಲ, ಜಗ್ಗಲ್ಲ. ಇದನ್ನು ಮುಂದುವರೆಸಲು ಇಷ್ಟವಿಲ್ಲ. ಹೇಳಿಕೆ ನೀಡಿದರೆ ಅದು ಮುಂದುವರೆಯುತ್ತಲೇ ಇರುತ್ತದೆ ಎಂದಿದ್ದಾರೆ.