ಬಾಗಲಕೋಟೆ: ಜನವರಿ 14ರ ಸಂಕ್ರಾಂತಿಯಂದು ಕೂಡಲಸಂಗಮದಲ್ಲಿ ಬೃಹತ್ ಸಮಾವೇಶ ನಡೆಸಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಹೊಸ ಬ್ರಿಗೇಡ್ ಸ್ಥಾಪನೆಗೆ ನಿರ್ಧರಿಸಲಾಗಿದೆ.
ಬಾಗಲಕೋಟೆಯ ಚರಂತಿಮಠ ಶಿವಾನುಭವ ಮಂಟಪದಲ್ಲಿ ನಡೆದ ಹಿಂದುಳಿದ, ದಲಿತ ಮತ್ತು ಸಮಗ್ರ ಹಿಂದೂ ಸಮಾಜದ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಹಮ್ಮಿಕೊಂಡಿದ್ದ ಚಿಂತನ -ಮಂಥನ ಸಭೆಯಲ್ಲಿ ಈ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗಿದೆ.
ಹಿಂದುಳಿದ ವರ್ಗಗಳ ಜನರು, ದಲಿತರು, ಹಿಂದೂಗಳು, ಮಠಗಳ ಏಳಿಗೆಗಾಗಿ ಜನವರಿ 14ರಂದು ಬೃಹತ್ ಸಮಾವೇಶ ನಡೆಸಿ ಸಂಘಟನೆ ಸ್ಥಾಪಿಸಲಾಗುವುದು. ಮಠಾಧೀಶರ ಸಮ್ಮುಖದಲ್ಲಿ ಸಂಘಕ್ಕೆ ನಾಮಕರಣ ಮಾಡಲಾಗುವುದು ಎಂದು ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ರಾಜಕಾರಣ ನನ್ನ ವೈಯಕ್ತಿಕ ವಿಚಾರ. ಅದನ್ನು ಸಂಘಟನೆಯಲ್ಲಿ ಬೆರೆಸುವುದಿಲ್ಲ. ಈ ಹಿಂದೆ ಹಿರಿಯರ ಮಾತಿಗೆ ಗೌರವ ನೀಡಿ ರಾಯಣ್ಣ ಬ್ರಿಗೇಡ್ ಹಿಂಪಡೆದುಕೊಂಡಿದ್ದೆ. ಈ ಬಾರಿ ಹಾಗಾಗುವುದಿಲ್ಲ. ಇದು ಅತೃಪ್ತರ ಸಭೆ ಅಲ್ಲ, ದಲಿತರು, ಹಿಂದುಳಿದ ಹಿಂದೂಗಳ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ ಎಂದು ಹೇಳಿದ್ದಾರೆ.