ಶಿವಮೊಗ್ಗ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್ ನಲ್ಲಿನ ಸಂಸ್ಕೃತಿ, ಧೋರಣೆ ಹೊಂದಿಕೊಳ್ಳಲ್ಲ. ಹೀಗಾಗಿಯೇ ಶೆಟ್ಟರ್ ಹೊರಗೆ ಬರುತ್ತಾರೆ. ಖಂಡಿತ ಶೆಟ್ಟರ್ ಅವರು ಬಿಜೆಪಿ ಗೆ ವಾಪಸ್ ಬರುತ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಸುಸಂಸ್ಕೃತ ಕುಟುಂಬ. ಹಿಂದೂ ಸಮಾಜ ರಕ್ತಗತ ಮಾಡಿಕೊಂಡ ಕುಟುಂಬ. ಜಗದೀಶ್ ಶೆಟ್ಟರ್ ತಂದೆ ಹುಬ್ಬಳ್ಳಿ ಮೇಯರ್, ಶಾಸಕರಾಗಿದ್ದರು. ಕೆಲ ಕಾರಣಗಳಿಗಾಗಿ ಶೆಟ್ಟರ್ ಕಾಂಗ್ರೆಸ್ ಗೆ ಹೋಗಿದ್ದಾರೆ. ಆದರೆ ಅಲ್ಲಿನ ಸಂಸ್ಕೃತಿ ಶೆಟ್ಟರ್ ಅವರಿಗೆ ಸರಿ ಬರುವುದಿಲ್ಲ. ಖಂಡಿತ ಅವರು ಬಿಜೆಪಿಗೆ ಹಿಂದಿರುಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶೆಟ್ಟರ್ ತಿರುಗೇಟು:
ನಾನು ಬಿಜೆಪಿಗೆ ವಾಪಸ್ ಹೋಗುತ್ತೇನೆ ಎಂದು ಕೆ.ಎಸ್. ಈಶ್ವರಪ್ಪ ನೀಡಿರುವ ಹೇಳಿಕೆ ಹಸಿ ಸುಳ್ಳು. ಬಿಜೆಪಿಯವರು ಕಾಂಗ್ರೆಸ್ ಗೆ ಬರುವುದನ್ನು ತಡೆಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ವಿಜಯಪುರದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಬೇರೆಯವರು ಕಾಂಗ್ರೆಸ್ ಗೆ ಬರಬಾರದು ಎಂದು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ನಾನು ಮರಳಿ ಬಿಜೆಪಿಗೆ ಹೋಗುವ ಮಾತೇ ಇಲ್ಲ. ನನಗೆ ಮತ್ತು ಲಕ್ಷ್ಮಣ ಸವದಿಯವರಿಗೆ ಟಿಕೆಟ್ ತಪ್ಪಿದ ಪರಿಣಾಮವನ್ನು ಜನ ಈಗಾಗಲೇ ತೋರಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಇದು ಮುಂದುವರೆಯಲಿದ್ದು, ಬಿಜೆಪಿಯವರು ಕಾಂಗ್ರೆಸ್ ಗೆ ಬರುವುದನ್ನು ತಡೆಯಲು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದರು.
ಜನಸಂಘದ ಕಾಲದಿಂದಲೂ ನಮ್ಮ ತಂದೆ, ಚಿಕ್ಕಪ್ಪ ಸಂಘಟನೆ ಮಾಡಿಕೊಂಡು ಬಂದಿದ್ದರು. ಅಂತಹ ಕುಟುಂಬದ ವ್ಯಕ್ತಿಗೆ ಎಂ.ಎಲ್.ಎ. ಟಿಕೆಟ್ ಕೊಡಲಿಲ್ಲ. ಜನಸಂಘದಿಂದ ಬಂದವರಿಗೆ ಬಿಜೆಪಿ ಟಿಕೆಟ್ ಕೊಡದೆ ಕಡೆಗಣಿಸಿದೆ ಎಂದು ಟೀಕಿಸಿದ್ದಾರೆ.