ಅನುದಾನ ಹಂಚಿಕೆ ವಿಚಾರವಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್. ಈಶ್ವರಪ್ಪ ರಾಜಭವನ ಬಾಗಿಲು ತಟ್ಟಿದ ಕ್ರಮಕ್ಕೆ ಬಿಜೆಪಿ ಹಿರಿಯ ನಾಯಕರಲ್ಲಿ ಆಂತರಿಕವಾಗಿ ಆಕ್ಷೇಪ ವ್ಯಕ್ತವಾಗಿದೆ ಎನ್ನಲಾಗಿದೆ.
ಧ್ವನಿಯೆತ್ತಿದ್ದು ಸರಿ. ಆದರೆ, ಹಿಡಿದ ಮಾರ್ಗ ಸರಿಯಾಗಿರಲಿಲ್ಲ. ಎರಡು ಅವಕಾಶಗಳಿದ್ದರೂ ರಾಜ್ಯಪಾಲರ ಭೇಟಿ ಒಪ್ಪುವಂತಹುದಲ್ಲ ಎನ್ನಲಾಗಿದೆ. ಸಂಪುಟ ಸಭೆ ಮತ್ತು ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ನೇರವಾಗಿ ಪ್ರಸ್ತಾಪಿಸಲು ಅವಕಾಶ ಇದ್ದರೂ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಹೊಸ ಸಚಿವರಾಗಿದ್ದಾರೆ ಮುಖ್ಯಮಂತ್ರಿ ಮುಂದೆ ಹೇಳಲು ಭಯ ಎನ್ನಬಹುದಿತ್ತು. ಆದರೆ, ಸಚಿವ ಈಶ್ವರಪ್ಪ ಹಿರಿಯರಾಗಿದ್ದುಕೊಂಡು ಹೀಗೆ ಮಾಡಿದ್ದು ಸರಿಯಲ್ಲ ಎಂದು ಆಂತರಿಕವಾಗಿ ಹಿರಿಯ ನಾಯಕ ಆಕ್ಷೇಪ ತೋರಿದ್ದಾರೆ ಎನ್ನಲಾಗಿದೆ.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಗೆ ಬಿಡುಗಡೆಯಾಗಿದ್ದ ಹಣಕ್ಕೆ ಅನುದಾನ ತಡೆಹಿಡಿದ ವಿಚಾರದಲ್ಲಿಯೂ ಈಶ್ವರಪ್ಪ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಹಣ ಬಿಡುಗಡೆ ಬಗ್ಗೆ ಹಿರಿಯ ನಾಯಕನ ಜೊತೆ ಪ್ರಸ್ತಾಪಿಸಲಾಗಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚಿಸುವಂತೆ ಸಚಿವ ಕೆ.ಎಸ್. ಈಶ್ವರಪ್ಪನವರಿಗೆ ಬಿಜೆಪಿ ಹಿರಿಯ ನಾಯಕ ಸೂಚಿಸಿದ್ದರು.
ನಾಯಕರೊಬ್ಬರ ಜೊತೆ ಚರ್ಚಿಸಿದ್ದೇನೆ. ಅವರು ಸೂಚಿಸಿದ್ದಂತೆ ಅನುದಾನ ತಡೆಹಿಡಿಯಲು ತಿಳಿಸಿದ್ದು, ಹೀಗಾಗಿ ಅನುದಾನ ತಡೆಹಿಡಿದಿದ್ದಾಗಿ ಈಶ್ವರಪ್ಪ ಹೇಳಿದ್ದಾರೆ. ತಾವು ಹೇಳದಿದ್ದರೂ ಸಚಿವ ಈಶ್ವರಪ್ಪ ತಮ್ಮ ಹೆಸರು ಹೇಳಿದ್ದಾರೆ ಎಂದು ಅನುದಾನ ವಿಚಾರದಲ್ಲಿ ಸಚಿವ ಈಶ್ವರಪ್ಪ ನಡೆ ಬಗ್ಗೆ ಬಿಜೆಪಿ ನಾಯಕ ಬೇಸರಗೊಂಡಿದ್ದಾರೆ ಎಂದು ಹೇಳಲಾಗಿದೆ.