ವಿಜಯಪುರ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕುಟುಂಬದ ವಿರುದ್ಧ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಯಡಿಯೂರಪ್ಪ ಕೇಂದ್ರ ಚುನಾವಣಾ ಸಮಿತಿ ಸದಸ್ಯರು. ಅವರ ಪುತ್ರ ಬಿ.ವೈ. ರಾಘವೇಂದ್ರ ಸಂಸದರಾಗಿದ್ದಾರೆ. ಮತ್ತೊಬ್ಬ ಮಗ ಬಿ.ವೈ. ವಿಜಯೇಂದ್ರ ಶಾಸಕರಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಮೋದಿ ಕುಟುಂಬ ಮುಕ್ತ ರಾಜಕಾರಣ ಮಾಡುತ್ತೇನೆ ಎನ್ನುತ್ತಾರೆ. ಹಾಗಾದರೆ ರಾಜ್ಯ ಬಿಜೆಪಿ ಕೇಂದ್ರದ ಹಿಡಿತದಲ್ಲಿ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಇಂತಹ ವಿಷಯ ಚರ್ಚೆ ಮಾಡಿದ ಬಳಿಕ ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದು ತಿಳಿಸಿದ್ದಾರೆ. ಬಿಜೆಪಿ ಮರು ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿಯಲ್ಲಿರುವ ಕೆಲವು ಗೊಂದಲಗಳು ಬಗೆಹರಿಯಬೇಕು. ರಾಜ್ಯ ಬಿಜೆಪಿ ಸ್ವಲ್ಪ ಶುದ್ಧೀಕರಣ ಆಗಬೇಕು. ಈ ಕಾರಣದಿಂದ ನಾನು ಎಂಪಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. ಆದರೆ, ಸುಮ್ಮನೆ ಬಿಜೆಪಿಗೆ ಹೋಗುವುದಿಲ್ಲ. ಏನಾಗಬೇಕು ಎಂಬುದನ್ನು ಕುಳಿತು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.