ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ, ಬಿಜೆಪಿಯಿಂದ ಉಚ್ಚಾಟನೆ ಮಾಡಿರುವುದಕ್ಕೆ ಹೆದುರುವುದಿಲ್ಲ. ಉಚ್ಚಾಟನೆ ಮಾಡಿರುವ ಆದೇಶ ನನಗೆ ಇನ್ನು ತಲುಪಿಲ್ಲ. ಮಾಧ್ಯಮಗಳಿಂದ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಈಗಾಗಲೇ ಸ್ಪರ್ಧಿಸಿದ್ದು ಗೆಲ್ಲುವುದು ನಿಶ್ಚಿತ. ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲು ಕೈ ಎತ್ತುವೆ ಎಂದು ನಾನು ಹೇಳಿದ್ದೆ. ಅದರಂತೆ ನಾಮಪತ್ರ ವಾಪಸ್ ಪಡೆದುಕೊಳ್ಳದೆ ಕಣದಲ್ಲಿ ಉಳಿದಿದ್ದೇನೆ. ನಾಳೆಯಿಂದ ಪ್ರಚಾರ ಕಾರ್ಯವನ್ನು ಮತ್ತಷ್ಟು ಬಿರುಸಾಗಿ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗ ಎರಡು ಕಬ್ಬು ಹಿಡಿದಿರುವ ರೈತನ ಚಿಹ್ನೆ ನೀಡಿದೆ. ರೈತ ಚಿಹ್ನೆ ದೊರೆತಿರುವುದು ಶುಭ ಸೂಚನೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು ಯಡಿಯೂರಪ್ಪ ಮತ್ತು ಮಕ್ಕಳ ಕೈಯಲ್ಲಿರುವ ಪಕ್ಷವನ್ನು ಮುಕ್ತ ಮಾಡಲು ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಹೇಳಿದ್ದಾರೆ.